
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜಿಗೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ (CSK) ಫ್ರಾಂಚೈಸಿ ಹೊಸ ಲೆಕ್ಕಾಚಾರವನ್ನು ಹಾಕಿಕೊಂಡಿದೆ. ಅದರ ಮೊದಲ ಹೆಜ್ಜೆಯಾಗಿ ಸಿಎಸ್ಕೆ ರವೀಂದ್ರ ಜಡೇಜಾ ಹಾಗೂ ಸ್ಯಾಮ್ ಕರನ್ ಅವರನ್ನು ನೀಡಿ ರಾಜಸ್ಥಾನ್ ರಾಯಲ್ಸ್ ತಂಡದಿಂದ ಸಂಜು ಸ್ಯಾಮ್ಸನ್ ಅವರನ್ನು ಖರೀದಿಸಿದೆ.

ಇದರ ಜೊತೆಗೆ ಇದೀಗ ಸಿಎಸ್ಕೆ ತಂಡದ ಪ್ರಮುಖ ವೇಗಿ ಮತೀಶ ಪತಿರಾಣ ಅವರನ್ನು ಬಿಡುಗಡೆ ಮಾಡಲು ಮುಂದಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಮೂಲಗಳ ಮಾಹಿತಿ ಪ್ರಕಾರ, ಪತಿರಾಣ ಅವರನ್ನು ತಂಡದಿಂದ ರಿಲೀಸ್ ಮಾಡಲು ಸಿಎಸ್ಕೆ ನಿರ್ಧರಿಸಿದ್ದು, ಅವರ ಬದಲಿಗೆ ಬೇರೊಬ್ಬ ವೇಗಿಯನ್ನು ಖರೀದಿಸಲು ಪ್ಲ್ಯಾನ್ ರೂಪಿಸಲಾಗಿದೆ.

ಇದರೊಂದಿಗೆ ಸಿಎಸ್ಕೆ ಫ್ರಾಂಚೈಸಿಯು ಮತೀಶ ಪತಿರಾಣ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವುದಿಲ್ಲ ಎಂಬುದು ಖಚಿತವಾಗಿದೆ. ಇದಕ್ಕೆ ಮುಖ್ಯ ಕಾರಣ ಕಳೆದ ಸೀಸನ್ನಲ್ಲಿನ ಪತಿರಾಣ ಅವರ ಪ್ರದರ್ಶನ. ಐಪಿಎಲ್ 2025 ರಲ್ಲಿ 12 ಪಂದ್ಯಗಳನ್ನಾಡಿದ್ದ ಲಂಕಾ ವೇಗಿ ಪಡೆದಿದ್ದು ಕೇವಲ 13 ವಿಕೆಟ್ಗಳನ್ನು ಮಾತ್ರ.

ಇದೀಗ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಮತೀಶ ಪತಿರಾಣ ಅವರನ್ನು ಉಳಿಸಿಕೊಳ್ಳದಿರಲು ಸಿಎಸ್ಕೆ ನಿರ್ಧರಿಸಿದೆ. ಇತ್ತ ಪತಿರಾಣ ಅವರನ್ನು ಬಿಡುಗಡೆ ಮಾಡುವುದರಿಂದ ಸಿಎಸ್ಕೆ ಫ್ರಾಂಚೈಸಿಯ ಹರಾಜು ಮೊತ್ತಕ್ಕೆ 13 ಕೋಟಿ ರೂ. ಸೇರ್ಪಡೆಯಾಗಲಿದೆ.

ಮತೀಶ ಪತಿರಾಣ ಅಲ್ಲದೆ, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ನ್ಯೂಝಿಲೆಂಡ್ ಆಟಗಾರರಾದ ಡೆವೊನ್ ಕಾನ್ವೆ ಹಾಗೂ ರಚಿನ್ ರವೀಂದ್ರ ಅವರನ್ನು ಸಹ ರಿಲೀಸ್ ಮಾಡಲಿದ್ದಾರೆ. ಇದರೊಂದಿಗೆ ಸಿಎಸ್ಕೆ ತಂಡದಿಂದ ಮೂವರು ವಿದೇಶಿ ಆಟಗಾರರು ಹೊರಬೀಳುವುದು ಖಚಿತವಾಗಿದೆ.