
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿನ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ 8 ಆಟಗಾರರನ್ನು ಖರೀದಿಸಿದೆ. ಈ ಮೂಲಕ ಐಪಿಎಲ್ 2026 ಕ್ಕಾಗಿ ಆರ್ಸಿಬಿ 25 ಆಟಗಾರರ ಬಲಿಷ್ಠ ಪಡೆಯನ್ನು ರೂಪಿಸಿದೆ. ಅದರಂತೆ ಹಾಲಿ ಚಾಂಪಿಯನ್ ಆರ್ಸಿಬಿ ಪಡೆಗೆ ಎಂಟ್ರಿ ಕೊಟ್ಟಿರುವ 8 ಆಟಗಾರರ ಪಟ್ಟಿ ಈ ಕೆಳಗಿನಂತಿವೆ...

ವೆಂಕಟೇಶ್ ಅಯ್ಯರ್: ಭಾರತದ ಆಲ್ ರೌಂಡರ್ ಆಟಗಾರ ವೆಂಕಟೇಶ್ ಅಯ್ಯರ್ ಅವರನ್ನು ಆರ್ಸಿಬಿ ಬರೋಬ್ಬರಿ 7 ಕೋಟಿ ರೂ.ಗೆ ಖರೀದಿಸಿದೆ. ಕಳೆದ ಸೀಸನ್‌ನಲ್ಲಿ ಅಯ್ಯರ್ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿದಿದ್ದರು. ಈ ಬಾರಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ವೆಂಕಿಯನ್ನು ಆರ್ಸಿಬಿ ಏಳು ಕೋಟಿ ರೂ. ನೀಡಿ ತನ್ನದಾಗಿಸಿಕೊಂಡಿದ್ದಾರೆ.

ಜೇಕಬ್ ಡಫಿ: ನ್ಯೂಝಿಲೆಂಡ್‌ನ ವೇಗದ ಬೌಲರ್ ಜೇಕಬ್ ಡಫಿ ಈ ಬಾರಿಯ ಹರಾಜಿನಲ್ಲಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದರು. ಇದೀಗ ಅವರನ್ನು ಬೇಸ್ ಪ್ರೈಸ್ ಗೆ (2 ಕೋಟಿ ರೂ.) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿದೆ. ಅದರಂತೆ ಮುಂಬರುವ ಟೂರ್ನಿಯಲ್ಲಿ ಡಫಿ ಆರ್ಸಿಬಿ ಪರ ಕಣಕ್ಕಿಳಿಯಲಿದ್ದಾರೆ.

ಸತ್ವಿಕ್ ದೇಸ್ವಾಲ್: ದೇಶೀಯ ಅಂಗಳದಲ್ಲಿ ಪುದುಚೇರಿ ಪರ ಕಣಕ್ಕಿಯುವ 18 ವರ್ಷದ ಆಲ್ ರೌಂಡರ್ ಸತ್ವಿಕ್ ದೇಸ್ವಾಲ್ ಅವರನ್ನು ಸಹ ಆರ್ಸಿಬಿ ಖರೀದಿಸಿದೆ. 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಸತ್ವಿಕ್ ಅವರನ್ನು ಬೇಸ್ ಪ್ರೈಸ್ ಗೆ ಆರ್ ಸಿಬಿ ಪರ್ಚೇಸ್ ಮಾಡಿದ್ದಾರೆ.

ಮಂಗೇಶ್ ಯಾದವ್: ಮಧ್ಯ ಪ್ರದೇಶ್ ತಂಡದ 23 ವರ್ಷದ ಯುವ ಆಲ್ ರೌಂಡರ್ ಈ ಬಾರಿ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದರು. ಈ ಆಟಗಾರನ ಖರೀದಿಗೆ ಪೈಪೋಟಿಗಿಳಿದ ಆರ್ಸಿಬಿ ಅಂತಿಮವಾಗಿ 5.20 ಕೋಟಿ ರೂ.ಗೆ ಖರೀದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜೋರ್ಡನ್ ಕಾಕ್ಸ್: ಇಂಗ್ಲೆಂಡಿನ ವಿಕೆಟ್ ಕೀಪರ್ ಬ್ಯಾಟರ್ ಜೋರ್ಡನ್ ಕಾಕ್ಸ್ ಆರ್ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. 75 ಲಕ್ಷ ರೂ. ಬೇಸ್ ಪ್ರೈಸ್ ನಲ್ಲಿ ಕಾಣಿಸಿಕೊಂಡಿದ್ದ ಕಾಕ್ಸ್ ನನ್ನು ಮೂಲ ಬೆಲೆಗೆ ಖರೀದಿಸುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಫಲರಾಗಿದ್ದಾರೆ.

ವಿಕ್ಕಿ ಒಸ್ತ್ವಾಲ್: ಮಹಾರಾಷ್ಟ್ರದ ಸ್ಪಿನ್ನರ್ ವಿಕ್ಕಿ ಒಸ್ತ್ವಾಲ್ ಕೂಡ ಆರ್ ಸಿಬಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಅಂಡರ್ 19 ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದ ವಿಕ್ಕಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 30 ಲಕ್ಷ ರೂ. ಮೂಲ ಬೆಲೆಗೆ ಖರೀದಿಸಿದೆ.

ಕಾನಿಷ್ಕ್ ಚೌಹಾನ್: ಭಾರತ ಅಂಡರ್-19 ತಂಡವನ್ನು ಪ್ರತಿನಿಧಿಸಿರುವ ಹರ್ಯಾಣದ 19 ವರ್ಷದ ಆಲ್ ರೌಂಡರ್ ಕಾನಿಷ್ಕ್ ಚೌಹಾನ್ ಅವರನ್ನು ಆರ್ಸಿಬಿ 30 ಲಕ್ಷ ರೂ. ಮೂಲ ಬೆಲೆಗೆ ಖರೀದಿಸಿದೆ. ಅದರಂತೆ ಮುಂಬರುವ ಸೀಸನ್‌ನಲ್ಲಿ ಕಾನಿಷ್ಕ್ ಆರ್ಸಿಬಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಿಹಾನ್ ಮಲ್ಹೋತ್ರ: ಪಂಜಾಬ್‌ನ 18 ವರ್ಷದ ಸ್ಪಿನ್ ಆಲ್ ರೌಂಡರ್ ವಿಹಾನ್ ಮಲ್ಹೋತ್ರ ಈ ಬಾರಿಯ ಹರಾಜಿನಲ್ಲಿ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದರು. ಅದರಂತೆ ಹರಾಜಿನಲ್ಲಿ 30 ಲಕ್ಷ ರೂ.ಗೆ ಬಿಡ್ ಮಾಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಹಾನ್ ಅವರನ್ನು ಖರೀದಿಸಿದೆ.

RCB ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ರಾಸಿಖ್ ದಾರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ವೆಂಕಟೇಶ್ ಅಯ್ಯರ್, ಜೋರ್ಡನ್ ಕಾಕ್ಸ್, ಜೇಕಬ್ ಡಫಿ, ವಿಕ್ಸಿ ಒಸ್ತ್ವಾಲ್, ಕಾನಿಷ್ಕ್ ಚೌಹಾನ್, ಸತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ವಿಹಾನ್ ಮಲ್ಹೋತ್ರ.