IPL 2026: 2 ಬಾರಿ ಅನ್ಸೋಲ್ಡ್, 3ನೇ ಬಾರಿ ಪೃಥ್ವಿ ಶಾ ಕೈ ಹಿಡಿದ ಅದೃಷ್ಟ
IPL 2026 Prithwi shaw Team: ಪೃಥ್ವಿ ಶಾ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಈವರೆಗೆ 79 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಅವರು 14 ಅರ್ಧಶತಕಗಳೊಂದಿಗೆ 1892 ರನ್ ಕಲೆಹಾಕಿದ್ದಾರೆ. ಇದಾಗ್ಯೂ ಪೃಥ್ವಿ ಶಾ ಕಳೆದ ಸೀಸನ್ನಲ್ಲಿ ಹರಾಜಾಗಿರಲಿಲ್ಲ. ಈ ಬಾರಿ 75 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಯುವ ದಾಂಡಿಗನನ್ನು ಕೊನೆಯ ಸುತ್ತಿನಲ್ಲಿ ಹಳೆಯ ಫ್ರಾಂಚೈಸಿಯೇ ಖರೀದಿಸಿದೆ.
Updated on: Dec 17, 2025 | 9:53 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಹರಾಜು ಪಟ್ಟಿಯ ಮೊದಲ ಸೆಟ್ನಲ್ಲಿ ಕಾಣಿಸಿಕೊಂಡಿದ್ದ ಭಾರತದ ಯುವ ಬ್ಯಾಟರ್ ಪೃಥ್ವಿ ಶಾ (Prithwi shaw) ಎರಡು ಸುತ್ತುಗಳಲ್ಲಿ ಮಾರಾಟವಾಗದೇ ಉಳಿದಿದ್ದರು. ಇದಾಗ್ಯೂ ಅಂತಿಮ ಸುತ್ತಿನಲ್ಲಿ ಅದೃಷ್ಟ ಲಕ್ಷ್ಮಿ ಪೃಥ್ವಿ ಗೆ ಒಲಿದಿದೆ.

ಹೌದು, ಈ ಬಾರಿ ಹರಾಜಿನಲ್ಲಿ 75 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಪೃಥ್ವಿ ಶಾ ಅವರನ್ನು ಮೊದಲ ಸುತ್ತಿನಲ್ಲೇ ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದಾಗ್ಯೂ ಅವರು ಅಕ್ಸ್ಲೇಟರ್ ರೌಂಡ್ನಲ್ಲಿ ಸ್ಥಾನ ಪಡೆದಿದ್ದರು. ಈ ವೇಳೆಯೂ ಪೃಥ್ವಿಯ ಖರೀದಿಗೆ ಯಾವುದೇ ಫ್ರಾಂಚೈಸಿ ಆಸಕ್ತಿ ತೋರಲಿಲ್ಲ.

ಇತ್ತ ಎರಡು ಸುತ್ತಿನಲ್ಲೂ ಮಾರಾಟವಾಗದೇ ಉಳಿದಿದ್ದರಿಂದ ಪೃಥ್ವಿ ಶಾ ಈ ಬಾರಿ ಕೂಡ ಅನ್ಸೋಲ್ಡ್ ಎಂದು ಷರಾ ಬರೆದಿದ್ದರು. ಆದರೆ ಅಂತಿಮ ಸುತ್ತಿನಲ್ಲಿ ಪೃಥ್ವಿಗೆ ಅದೃಷ್ಟ ಖುಲಾಯಿಸಿದೆ. ಕೊನೆಯ ಸುತ್ತಿನಲ್ಲಿ ಮೂರನೇ ಬಾರಿ ಕಾಣಿಸಿಕೊಂಡ ಪೃಥ್ವಿ ಶಾ ಅವರಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಬಿಡ್ ಮಾಡಿದೆ.

ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು 75 ಲಕ್ಷ ರೂ.ಗೆ ಪೃಥ್ವಿ ಶಾ ಅವರನ್ನು ಖರೀದಿಸಿದ್ದು, ಅದರಂತೆ ಮುಂಬರುವ ಸೀಸನ್ನಲ್ಲಿ ಯುವ ಬಲಗೈ ದಾಂಡಿಗ ಡೆಲ್ಲಿ ಪರ ಕಣಕ್ಕಿಳಿಯಲಿದ್ದಾರೆ. ಇದಕ್ಕೂ ಮುನ್ನ 2024 ರಲ್ಲಿ ಪೃಥ್ವಿ ಶಾ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು.

ಐಪಿಎಲ್ 2024 ರಲ್ಲಿ 7.5 ಕೋಟಿ ರೂ. ಪಡೆದಿದ್ದ ಪೃಥ್ವಿ ಶಾ ಅವರನ್ನು ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಅದರಂತೆ ಈ ಬಾರಿ 75 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಯುವ ದಾಂಡಿಗನನ್ನು ಕೊನೆಗೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯೇ ಕೈ ಹಿಡಿದಿದೆ.
