
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿಗೂ ಮುನ್ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ 8 ಆಟಗಾರರನ್ನು ಬಿಡುಗಡೆ ಮಾಡಿದ್ದಾರೆ. ಕಳೆದ ಸೀಸನ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಕೆಲ ಆಟಗಾರರಿಗೆ ಆರ್ಸಿಬಿ ಗೇಟ್ ಪಾಸ್ ನೀಡಿದೆ.

ಕಳೆದ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಒಟ್ಟು 22 ಆಟಗಾರರು ಕಾಣಿಸಿಕೊಂಡಿದ್ದರು. ಅಲ್ಲದೆ ಮೂವರು ಬದಲಿ ಆಟಗಾರರಾಗಿ ಎಂಟ್ರಿ ಕೊಟ್ಟಿದ್ದರು. ಇದೀಗ ಈ 25 ಆಟಗಾರರಲ್ಲಿ ಆರ್ಸಿಬಿ ಫ್ರಾಂಚೈಸಿ 17 ಆಟಗಾರರನ್ನು ಮಾತ್ರ ತಂಡದಲ್ಲೇ ಉಳಿಸಿಕೊಂಡಿದೆ. ಅದರಂತೆ ಆರ್ಸಿಬಿ ತಂಡದಿಂದ ಬಿಡುಗಡೆಯಾಗಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

ಲಿಯಾಮ್ ಲಿವಿಂಗ್ಸ್ಟೋನ್: ಐಪಿಎಲ್ 2025 ರಲ್ಲಿ ಆರ್ಸಿಬಿ ಪರ ಆಲ್ರೌಂಡರ್ ಆಗಿ ಕಾಣಿಸಿಕೊಂಡ ಲಿಯಾಮ್ ಲಿವಿಂಗ್ಸ್ಟೋನ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಒಟ್ಟು 10 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಲಿವಿಂಗ್ಸ್ಟೋನ್ ಕೇವಲ 112 ರನ್ ಮಾತ್ರ ಕಲೆಹಾಕಿದ್ದರು. ಅಲ್ಲದೆ 5 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಅವರು ಕಬಳಿಸಿದ್ದು 2 ವಿಕೆಟ್ ಮಾತ್ರ. ಹೀಗಾಗಿಯೇ ಆರ್ಸಿಬಿ ಲಿಯಾಮ್ ಲಿವಿಂಗ್ಸ್ಟೋನ್ ಅವರನ್ನು ತಂಡದಿಂದ ಬಿಡುಗಡೆ ಮಾಡಿದ್ದಾರೆ.

ಮಯಾಂಕ್ ಅಗರ್ವಾಲ್: ಐಪಿಎಲ್ 2025 ರಲ್ಲಿ ದೇವದತ್ ಪಡಿಕ್ಕಲ್ ಗಾಯಗೊಂಡಾಗ ಮಯಾಂಕ್ ಅಗರ್ವಾಲ್ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿತ್ತು. ಅದರಂತೆ ಕಳೆದ ಸೀಸನ್ನಲ್ಲಿ 4 ಪಂದ್ಯಗಳನ್ನಾಡಿದ್ದ ಮಯಾಂಕ್ ಅವರನ್ನೂ ಸಹ ಆರ್ಸಿಬಿ ರಿಲೀಸ್ ಮಾಡಿದೆ.

ಬ್ಲೆಸಿಂಗ್ ಮುಝರಬಾನಿ: ಐಪಿಎಲ್ನ ಕೊನೆಯ ಎರಡು ಪಂದ್ಯಗಳ ವೇಳೆ ಆರ್ಸಿಬಿ ತಂಡದಲ್ಲಿ ಕಾಣಿಸಿಕೊಂಡ ಝಿಂಬಾಬ್ವೆ ವೇಗಿ ಬ್ಲೆಸಿಂಗ್ ಮುಝರಬಾನಿಯನ್ನು ಸಹ ಕೈ ಬಿಟ್ಟಿದ್ದಾರೆ. ಏಕೆಂದರೆ ಮುಝರಬಾನಿ ಅವರನ್ನು ತಾತ್ಕಾಲಿಕ ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ಹೀಗೆ ಆಯ್ಕೆಯಾದ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವಂತಿಲ್ಲ.

ಟಿಮ್ ಸೈಫರ್ಟ್: ಜೇಕಬ್ ಬೆಥೆಲ್ ತವರಿಗೆ ಹಿಂತಿರುಗಿದ ಕಾರಣ ಆರ್ಸಿಬಿ ನ್ಯೂಝಿಲೆಂಡ್ನ ವಿಕೆಟ್ ಕೀಪರ್ ಟಿಮ್ ಸೈಫರ್ಟ್ ಅವರನ್ನು ಬದಲಿಯಾಗಿ ಆಯ್ಕೆ ಮಾಡಿಕೊಂಡಿತ್ತು. ಆದರೆ ತಾತ್ಕಾಲಿಕ ಬದಲಿ ಆಟಗಾರನಾಗಿ ಆಯ್ಕೆಯಾಗಿರುವ ಸೈಫರ್ಟ್ ಅವರನ್ನು ಸಹ ತಂಡದಲ್ಲಿ ಉಳಿಸಿಕೊಳ್ಳುವಂತಿಲ್ಲ. ಹೀಗಾಗಿ ಟಿಮ್ ಸೈಫರ್ಟ್ ಅವರನ್ನು ಸಹ ಆರ್ಸಿಬಿ ಬಿಡುಗಡೆ ಮಾಡಿದೆ.

ಮೋಹಿತ್ ರಾಥಿ: ಆರ್ಸಿಬಿ ತಂಡದಲ್ಲಿರುವ ಯುವ ಆಲ್ರೌಂಡರ್ ಮೋಹಿತ್ ರಾಥಿ ಕೂಡ ಈ ಬಾರಿ ಒಂದೇ ಒಂದು ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಅತ್ತ ಇಂಪ್ಯಾಕ್ಟ್ ಸಬ್ ಪಟ್ಟಿಯಲ್ಲೂ ಮೋಹಿತ್ಗೆ ಸ್ಥಾನ ಲಭಿಸಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ. ಹೀಗಾಗಿ ಅವರನ್ನು ಸಹ ತಂಡದಿಂದ ಕೈ ಬಿಟ್ಟಿದ್ದಾರೆ.

ಮನೋಜ್ ಭಾಂಡಗೆ: ಆರ್ಸಿಬಿ ತಂಡದಲ್ಲಿದ್ದ ಕರ್ನಾಟಕದ ಯುವ ಆಲ್ರೌಂಡರ್ ಮನೋಜ್ ಭಾಂಡಗೆ ಅವರನ್ನು ಸಹ ಮುಂದಿನ ಸೀಸನ್ಗಾಗಿ ತಂಡದಲ್ಲಿ ಉಳಿಸಿಕೊಂಡಿಲ್ಲ. ಕಳೆದ ಸೀಸನ್ನಲ್ಲಿ ಆರ್ಸಿಬಿ ಪರ ಮೊನೋಜ್ ಒಂದು ಪಂದ್ಯದಲ್ಲಿ ಕಣಕ್ಕಿಳಿದಿದ್ದರು. ಇದಾಗ್ಯೂ ಅವರನ್ನು ರಿಟೈನ್ ಮಾಡಿಕೊಂಡಿಲ್ಲ.

ಸ್ವಸ್ತಿಕ್ ಚಿಕಾರ: ಐಪಿಎಲ್ 2025 ರಲ್ಲಿ ಆರ್ಸಿಬಿ ತಂಡದಲ್ಲಿ ಕಾಣಿಸಿಕೊಂಡಿದ್ದ ಸ್ವಸ್ತಿಕ್ ಚಿಕಾರ ಅವರನ್ನು ಸಹ ರಿಟೈನ್ ಮಾಡಿಕೊಂಡಿಲ್ಲ. ಸ್ಫೋಟಕ ದಾಂಡಿಗನಾಗಿ ಗುರುತಿಸಿಕೊಂಡಿರುವ ಸ್ವಸ್ತಿಕ್ಗೆ ಕಳೆದ ಸೀಸನ್ನಲ್ಲಿ ಒಂದು ಒಂದು ಮ್ಯಾಚ್ನಲ್ಲಿ ಚಾನ್ಸ್ ಸಿಕ್ಕಿರಲಿಲ್ಲ. ಇದೀಗ ಆರ್ಸಿಬಿ ಫ್ರಾಂಚೈಸಿ ಅವರನ್ನು ಸಹ ತಂಡದಿಂದ ಕೈ ಬಿಟ್ಟಿದ್ದಾರೆ.

ಲುಂಗಿ ಎನ್ಗಿಡಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಳೆದ ಸೀಸನ್ನಲ್ಲಿ 2 ಮ್ಯಾಚ್ ಆಡಿದ್ದ ಸೌತ್ ಆಫ್ರಿಕಾ ವೇಗಿ ಲುಂಗಿ ಎನ್ಗಿಡಿ ಅವರನ್ನು ಸಹ ರಿಲೀಸ್ ಮಾಡಲಾಗಿದೆ. ಲುಂಗಿ ಎನ್ಗಿಡಿ ಐಪಿಎಲ್ 2025 ರಲ್ಲಿ 2 ಪಂದ್ಯಗಳಿಂದ 4 ವಿಕೆಟ್ ಕಬಳಿಸಿದ್ದರು. ಇದಾಗ್ಯೂ ಆರ್ಸಿಬಿ ಅವರನ್ನು ತಂಡದಿಂದ ಕೈ ಬಿಟ್ಟಿದೆ.
Published On - 5:24 pm, Sat, 15 November 25