
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಸಿದ್ಧತೆಗಳ ನಡುವೆಯೇ ವಿರಾಟ್ ಕೊಹ್ಲಿ (Virat Kohli) ಐಪಿಎಲ್ಗೆ ವಿದಾಯ ಹೇಳುವ ಸಾಧ್ಯತೆಯಿದೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗುಡ್ ಬೈ ಹೇಳುವ ಮೂಲಕ ಕಿಂಗ್ ಕೊಹ್ಲಿ ಐಪಿಎಲ್ ಕೆರಿಯರ್ ಅಂತ್ಯಗೊಳಿಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಐಪಿಎಲ್ ಸೀಸನ್-19 ಗೂ ಮುಂಚಿತವಾಗಿ ವಿರಾಟ್ ಕೊಹ್ಲಿ ಪ್ರಮುಖ ಕಂಪನಿಯೊಂದಿಗೆ ತಮ್ಮ ಒಪ್ಪಂದವನ್ನು ನವೀಕರಿಸಲು ನಿರಾಕರಿಸಿದ್ದಾರೆ. ಈ ಒಪ್ಪಂದವನ್ನು ಐಪಿಎಲ್ 2026 ರ ಮೊದಲು ನವೀಕರಿಸಬೇಕಿತ್ತು. ಆದರೆ ಆರ್ಸಿಬಿ ಸ್ಟಾರ್ ಆಟಗಾರ ಹಾಗೆ ಮಾಡದಿರುವುದು ಇದೀಗ ಅನುಮಾನಕ್ಕೆ ಕಾರಣವಾಗಿದೆ.

ಆರ್ಸಿಬಿ ಜೊತೆ ಸಂಪರ್ಕ ಹೊಂದಿರುವ ಕಂಪೆನಿಯೊಂದರ ಜೊತೆ ವಿರಾಟ್ ಕೊಹ್ಲಿ ಹೊಸ ಒಪ್ಪಂದವನ್ನು ನವೀಕರಿಸಿಲ್ಲ. ಕೊಹ್ಲಿಯ ಈ ನಡೆಗೆ ಕಾರಣವೇನು ಎಂಬುದು ಇನ್ನೂ ಸಹ ಬಹಿರಂಗವಾಗಿಲ್ಲ. ಆದರೆ ಇಂತಹದೊಂದು ನಿರ್ಧಾರವು ಇದೀಗ ಎಲ್ಲರನ್ನು ಆಶ್ಚರ್ಯಗೊಳಿಸಿದೆ.

ಅಂದರೆ ವಿರಾಟ್ ಕೊಹ್ಲಿ ನಿವೃತ್ತಿಯ ಬಗ್ಗೆ ಯೋಚಿಸುತ್ತಿದ್ದು, ಹೀಗಾಗಿಯೇ ಪ್ರಮುಖ ಕಂಪೆನಿ ಜೊತೆ ಒಪ್ಪಂದ ಮಾಡಿಕೊಂಡಿಲ್ಲ ಎನ್ನಲಾಗುತ್ತಿದೆ. ಈಗಾಗಲೇ ಟೆಸ್ಟ್ ಹಾಗೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ಕೊಹ್ಲಿ ಸದ್ಯ ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಮುಂದುವರೆಯುತ್ತಿದ್ದಾರೆ.

ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಬಳಿಕ ಕಿಂಗ್ ಕೊಹ್ಲಿ ಒಡಿಐ ಕ್ರಿಕೆಟ್ಗೂ ವಿದಾಯ ಹೇಳಲಿದ್ದಾರೆ ಎನ್ನಲಾಗುತ್ತಿದೆ. ಇದರ ನಡುವೆ ಐಪಿಎಲ್ಗೂ ಗುಡ್ ಬೈ ಹೇಳುವ ಇರಾದೆಯಲ್ಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಅಂದರೆ ಈ ಬಾರಿಯ ಐಪಿಎಲ್ ಮೂಲಕ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗಿನ 19 ವರ್ಷಗಳ ಪಯಣವನ್ನು ಅಂತ್ಯಗೊಳಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.