Updated on: Mar 23, 2023 | 1:18 PM
ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್‌ನಲ್ಲಿ ಸಾಮಾನ್ಯವಾಗಿ ಬ್ಯಾಟರ್ಗಳ ಅಬ್ಬರದ ಸದ್ದೇ ಹೆಚ್ಚಾಗಿ ಕೇಳಿ ಬರುತ್ತದೆ. ಕೆಲವೊಮ್ಮೆ ಮಾತ್ರ ಬೌಲರ್ಗಳು ಮಿಂಚುವ ಅವಕಾಶ ಸಿಗುತ್ತದೆ. ಹೀಗೆ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡ ಕೆಲವು ಬೌಲರ್ಗಳು ಐಪಿಎಲ್‌ನಲ್ಲಿ ಅಪರೂಪದ ದಾಖಲೆಗಳನ್ನು ಬರೆದಿದ್ದಾರೆ. ಅಂತಹವರ ಪಟ್ಟಿ ಇಲ್ಲಿದೆ.
ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ಬೌಲರ್ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆಲ್‌ರೌಂಡರ್ ಬ್ರಾವೋ ಕೂಡ ಒಬ್ಬರು. ಐಪಿಎಲ್‌ನಲ್ಲಿ 181 ವಿಕೆಟ್‌ಗಳನ್ನು ಕಬಳಿಸಿರುವ ಬ್ರಾವೋ, ಈ ಚುಟುಕು ಮಾದರಿಯಲ್ಲಿ ಅತಿ ಹೆಚ್ಚು ವಿಕೆಟ್ ತೆಗೆದಿರುವ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ. ಇವರ ನಂತರ 170 ವಿಕೆಟ್ ಪಡೆದಿರುವ ಲಸಿತ್ ಮಾಲಿಂಗ ಎರಡನೇ ಸ್ಥಾನದಲ್ಲಿದ್ದಾರೆ. ಅಮಿತ್ ಮಿಶ್ರಾ 166 ವಿಕೆಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಐಪಿಎಲ್ನ ಮತ್ತೊಬ್ಬ ಯಶಸ್ವಿ ಬೌಲರ್ ಎಂದರೆ ಅದು ರಶೀದ್ ಖಾನ್, ತನ್ನ ಗೂಗ್ಲಿಯಿಂದ ಎದುರಾಳಿ ಬ್ಯಾಟರ್ಗೆ ಚಳ್ಳೇ ಹಣ್ಣು ತಿನಿಸುವ ರಶೀದ್, ರನ್ ಬಿಟ್ಟುಕೊಡುವುದರಲ್ಲಿ ಭಾರಿ ಕಂಜೂಸ್. ಹೀಗಾಗಿ ಐಪಿಎಲ್‌ನಲ್ಲಿ ಅತಿ ಕಡಿಮೆ ಎಕಾನಮಿ ಹೊಂದಿರುವ ಲೆಗ್-ಸ್ಪಿನ್ನರ್ ರಶೀದ್ ಪ್ರತಿ ಓವರ್‌ಗೆ 6.35ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ಅಲ್ಲದೆ ಈ ಎಕಾನಮಿಯೊಂದಿಗೆ 100 ಅಥವಾ ಅದಕ್ಕಿಂತ ಹೆಚ್ಚಿನ ವಿಕೆಟ್‌ಗಳನ್ನು ಹೊಂದಿರುವ ಮೊದಲ ಬೌಲರ್ ರಶೀದ್.
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಎಸೆದ ಬೌಲರ್ಗಳ ಪೈಕಿ ಭುವನೇಶ್ವರ್ ಕುಮಾರ್ಗೆ ಮೊದಲ ಸ್ಥಾನವಿದೆ. ಭುವಿ ಇದುವರೆಗೆ 1400 ಎಸೆತಗಳನ್ನು ಡಾಟ್ ಬಾಲ್ ಎಸೆದಿರುವ ದಾಖಲೆ ಬರೆದಿದ್ದಾರೆ. ಇವರ ನಂತರ1357 ಡಾಟ್ ಬಾಲ್‌ಗಳನ್ನು ಎಸೆದಿರುವ ರವಿಚಂದ್ರನ್ ಅಶ್ವಿನ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಸುನಿಲ್ ನರೈನ್ 1346 ಡಾಟ್ ಬಾಲ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪೈಕಿ ಆರ್ಸಿಬಿಯ ಹರ್ಷಲ್ ಪಟೇಲ್ ಮತ್ತು ಸಿಎಸ್ಕೆ ತಂಡದ ಮಾಜಿ ಆಟಗಾರ ಬ್ರಾವೋ ಮೊದಲ ಸ್ಥಾನದಲ್ಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್ ಹರ್ಷಲ್ ಪಟೇಲ್ 2021ರ ಸೀಸನ್ನಲ್ಲಿ ಅತ್ಯಧಿಕ 32 ವಿಕೆಟ್ಗಳನ್ನು ಪಡೆದಿದ್ದಾರೆ. ಹರ್ಷಲ್ 15 ಪಂದ್ಯಗಳನ್ನು ಆಡಿ ಈ ಸಾಧನೆ ಮಾಡಿದ್ದರೆ, ಡ್ವೇನ್ ಬ್ರಾವೋ 18 ಪಂದ್ಯಗಳಲ್ಲಿ 32 ವಿಕೆಟ್ ಪಡೆದ ದಾಖಲೆ ಬರೆದಿದ್ದಾರೆ.
ಒಂದು ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಬೌಲರ್ಗಳ ಪೈಕಿ ಅಲ್ಜಾರಿ ಜೋಸೆಫ್ ಮೊದಲ ಸ್ಥಾನ ಪಡೆದಿದ್ದಾರೆ. ಜೋಸೆಫ್ ಒಂದು ಪಂದ್ಯದಲ್ಲಿ 12 ರನ್ ನೀಡಿ 6 ವಿಕೆಟ್ ಪಡೆದಿರುವುದು ಇದುವರೆಗಿನ ದಾಖಲೆಯಾಗಿದೆ. ಇವರಲ್ಲದೇ ಸೋಹಿಲ್ ತನ್ವೀರ್ ಮತ್ತು ಆಡಮ್ ಝಂಪಾ ಕೂಡ ಒಂದು ಪಂದ್ಯದಲ್ಲಿ ತಲಾ 6 ವಿಕೆಟ್ ಪಡೆದಿದ್ದಾರೆ. ತನ್ವೀರ್ 14 ರನ್ ಮತ್ತು ಝಂಪಾ 19 ರನ್ ನೀಡಿ 6 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
Published On - 1:18 pm, Thu, 23 March 23