Updated on:Mar 23, 2023 | 4:19 PM
India vs Australia: ಚೆನ್ನೈನ ಚೆಪಾಕ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 21 ರನ್ಗಳಿಂದ ಸೋಲನುಭವಿಸಿತ್ತು. ಭಾರತ ತಂಡದ ಈ ಸೋಲಿನೊಂದಿಗೆ 3 ಪಂದ್ಯಗಳ ಸರಣಿಯನ್ನು ಆಸ್ಟ್ರೇಲಿಯಾ 2-1 ಅಂತರದಿಂದ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಬಹುತೇಕ ಆಟಗಾರರು ವಿಫಲರಾದರೂ, ವಿರಾಟ್ ಕೊಹ್ಲಿ (Virat Kohli) ಮಾತ್ರ ಉಪಯುಕ್ತ ಕಾಣಿಕೆ ನೀಡಿದ್ದರು.
ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಕೊಹ್ಲಿ 72 ಎಸೆತಗಳಲ್ಲಿ 2 ಫೋರ್ ಹಾಗೂ 1 ಸಿಕ್ಸ್ನೊಂದಿಗೆ 54 ರನ್ ಬಾರಿಸಿದ್ದರು. ಏಕದಿನ ಕ್ರಿಕೆಟ್ ಕೆರಿಯರ್ನ 65ನೇ ಅರ್ಧಶತಕ ಪೂರೈಸುವುದರೊಂದಿಗೆ ಕಿಂಗ್ ಕೊಹ್ಲಿ ಮತ್ತೆರಡು ವಿಶ್ವ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು.
ಚೆನ್ನೈನಲ್ಲಿ ಅರ್ಧಶತಕ ಪೂರೈಸುವುದರೊಂದಿಗೆ ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ಹಾಫ್ ಸೆಂಚುರಿ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 3ನೇ ಸ್ಥಾನಕ್ಕೇರಿದ್ದಾರೆ. ಅಲ್ಲದೆ ಆಸೀಸ್ ವಿರುದ್ಧ 18 ಅರ್ಧಶತಕ ಬಾರಿಸಿದ ವೆಸ್ಟ್ ಇಂಡೀಸ್ನ ದಂತಕಥೆ ಬ್ರಿಯಾನ್ ಲಾರಾ ಅವರನ್ನು ಹಿಂದಿಕ್ಕಿದ್ದಾರೆ.
ಸದ್ಯ ಆಸ್ಟ್ರೇಲಿಯಾ ವಿರುದ್ಧ ಅತೀ ಹೆಚ್ಚು ಅರ್ಧಶತಕ ಬಾರಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್ ಆಸೀಸ್ ವಿರುದ್ಧ ಏಕದಿನ ಕ್ರಿಕೆಟ್ ಒಟ್ಟು 24 ಅರ್ಧಶತಕ ಬಾರಿಸಿದರೆ, ವೆಸ್ಟ್ ಇಂಡೀಸ್ನ ಮಾಜಿ ದಂತಕಥೆ ವಿವಿಯನ್ ರಿಚರ್ಡ್ಸ್ (23 ಅರ್ಧಶತಕ) ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಇದೀಗ 19 ಅರ್ಧಶತಕಗಳೊಂದಿಗೆ ವಿರಾಟ್ ಕೊಹ್ಲಿ 3ನೇ ಸ್ಥಾನ ಅಲಂಕರಿಸಿದ್ದಾರೆ.
ಇನ್ನು ಏಕದಿನ ಕ್ರಿಕೆಟ್ನಲ್ಲಿ ತವರಿನಲ್ಲಿ ಅತೀ ಹೆಚ್ಚು 50+ ಸ್ಕೋರ್ ಬಾರಿಸಿದ ಬ್ಯಾಟರ್ಗಳ ಪಟ್ಟಿಯಲ್ಲೂ ಕಿಂಗ್ ಕೊಹ್ಲಿ ಒಂದು ಸ್ಥಾನ ಮೇಲೇರಿದ್ದಾರೆ. ಈ ಹಿಂದೆ ತವರಿನಲ್ಲಿ 46 ಬಾರಿ 50+ ಸ್ಕೋರ್ಗಳಿಸಿದ್ದ ಸೌತ್ ಆಫ್ರಿಕಾದ ಜಾಕ್ಸ್ ಕಾಲಿಸ್ ಅವರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ. ಈ ಮೂಲಕ ಭಾರತದಲ್ಲೇ 47 ಬಾರಿ ಫಿಫ್ಟಿ ಪ್ಲಸ್ ಸ್ಕೋರ್ ಬಾರಿಸಿದ ವಿಶೇಷ ಸಾಧನೆ ಮಾಡಿದ್ದಾರೆ.
ತವರಿನಲ್ಲಿ ಅತೀ ಹೆಚ್ಚು ಬಾರಿ 50+ ಸ್ಕೋರ್ ಸರದಾರರ ಪಟ್ಟಿಯಲ್ಲೂ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಸಚಿನ್ ತೆಂಡೂಲ್ಕರ್ ಭಾರತದ ಪಿಚ್ನಲ್ಲಿ 58 ಬಾರಿ ಐವತ್ತಕ್ಕಿಂತ ಹೆಚ್ಚು ರನ್ ಕಲೆಹಾಕಿದ್ದರು. ಇದೀಗ 47 ಬಾರಿ 50+ ಸ್ಕೋರ್ ಕಲೆಹಾಕುವ ಮೂಲಕ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿರುವುದು ವಿಶೇಷ.
Published On - 3:58 pm, Thu, 23 March 23