2025 ರ ಐಪಿಎಲ್ ಗೆಲ್ಲುವ ಪ್ರಮುಖ ತಂಡಗಳಲ್ಲಿ ಕಳೆದ ಬಾರಿಯ ರನ್ನರ್ ಅಪ್ ಸನ್‌ರೈಸರ್ಸ್ ಹೈದರಾಬಾದ್ ತಂಡ ಕೂಡ ಒಂದಾಗಿದೆ. ಇದಕ್ಕೆ ಪೂರಕವಾಗಿ ಟೂರ್ನಿಯಲ್ಲಿ ಆಡಿದ್ದ ಮೊದಲ ಪಂದ್ಯದಲ್ಲೇ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲ ತಂಡಗಳ ನಿದ್ದೆಗೆಡಿಸಿದ್ದ ಸನ್‌ರೈಸರ್ಸ್ ತಂಡದ ಬ್ಯಾಟರ್ಗಳಿಗೆ ಆ ನಂತರ ಮ್ಯಾಜಿಕ್ ತೊರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ತಂಡ ಸತತ 3 ಸೋಲುಗಳನ್ನು ಕಂಡಿದೆ.
ಅದರಲ್ಲೂ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದ ಇಶಾನ್ ಕಿಶನ್, ಉಳಿದ 3 ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದಾರೆ. ವಾಸ್ತವವಾಗಿ ಈ ಪಂದ್ಯದಲ್ಲಿ ಶತಕ ಸಿಡಿಸಿದ ಬಳಿಕ ಮಾತನಾಡಿದ್ದ ಕಿಶನ್ ಬಳಿ ಮುಂದಿನ ಪಂದ್ಯದಲ್ಲಿ ದ್ವಿಶತಕ ಬಾರಿಸ್ತೀರಾ ಎಂಬ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ್ದ ಕಿಶನ್, ಅವಕಾಶ ಸಿಕ್ಕರೆ ಖಂಡಿತ ಬಾರಿಸ್ತೀನಿ ಎಂದಿದ್ದರು.
ಆದರೆ ಆಡಿರುವ 3 ಪಂದ್ಯಗಳಲ್ಲಿ ಅಂತಹ ಅವಕಾಶ ಸಿಕ್ಕರೂ ಕಿಶನ್ಗೆ ಒಂದಂಕಿಯನ್ನು ದಾಟಲು ಸಾಧ್ಯವಾಗುತ್ತಿಲ್ಲ. ಮೊದಲ ಪಂದ್ಯದಲ್ಲಿ ಕೇವಲ 47 ಎಸೆತಗಳಲ್ಲಿ 11 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 106 ರನ್ ಸಿಡಿಸಿದ್ದರು. ಆದರೆ ಆ ಬಳಿಕ ಕಿಶನ್ ಆಡಿರುವ 3 ಪಂದ್ಯಗಳಲ್ಲಿ ಬೇಗನೇ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿದ್ದರೂ ಅವರಿಗೆ ಒಂದಂಕಿ ದಾಟಲು ಸಾಧ್ಯವಾಗಿಲ್ಲ.
ಲಕ್ನೋ ಸೂಪರ್ಜೈಂಟ್ಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಕೇವಲ 1 ಎಸೆತವನ್ನು ಎದುರಿಸಿದ್ದ ಕಿಶನ್, ಖಾತೆ ತೆರೆಯದೆ ಔಟಾಗಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮೂರನೇ ಪಂದ್ಯದಲ್ಲೂ ಬಹು ಬೇಗನೇ ಬ್ಯಾಟಿಂಗ್ಗೆ ಬಂದಿದ್ದ ಕಿಶನ್ ಕೇವಲ 5 ಎಸೆತಗಳನ್ನು ಎದುರಿಸಿ 2 ರನ್ ಕಲೆಹಾಕಲಷ್ಟೇ ಶಕ್ತರಾಗಿದ್ದರು.
ಇದೀಗ ನಿನ್ನೆ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲೂ ಮೊದಲ ಓವರ್ನಲ್ಲೇ ಬ್ಯಾಟಿಂಗ್ಗೆ ಬಂದಿದ್ದ ಕಿಶನ್ ಐದು ಎಸೆತಗಳನ್ನು ಎದುರಿಸಿ ಮತ್ತೆ 2 ರನ್‌ಗಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಹೀಗೆ ಮೊದಲ ಪಂದ್ಯದಲ್ಲಿ ಶತಕದ ಇನ್ನಿಂಗ್ಸ್ ಆಡಿದ ಬಳಿಕ ಉಳಿದ 3 ಪಂದ್ಯಗಳಲ್ಲಿ ಕಿಶನ್ ಬ್ಯಾಟ್ಗೆ ರನ್ ಕಲೆಹಾಕುವುದೇ ಮರೆತು ಹೋಗಿದೆ.