
ಹೈದರಾಬಾದ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ (Team India) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 246 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಪರ ಮೂವರು ಅರ್ಧಶತಕ ಬಾರಿಸಿ ಮಿಂಚಿದರು.

ಆದರೆ ಈ ಮೂವರು ದಾಂಡಿಗರು ಕೂಡ 90ರ ಅಸುಪಾಸಿನಲ್ಲಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಅಂದರೆ ಶತಕ ಪೂರೈಸಲು ಉತ್ತಮ ಅವಕಾಶವಿದ್ದರೂ ಟೀಮ್ ಇಂಡಿಯಾ ಬ್ಯಾಟರ್ಗಳು ಆ ಚಾನ್ಸ್ಗಳನ್ನು ಕೈಚೆಲ್ಲಿಕೊಂಡಿದ್ದಾರೆ.

ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅದರಲ್ಲೂ ಬಾಝ್ಬಾಲ್ಗೆ ಪರ್ಯಾಯವಾಗಿ ಜೈಸ್ಬಾಲ್ ಆಟ ತೋರಿಸಿದ್ದ ಜೈಸ್ವಾಲ್ ಕೇವಲ 74 ಎಸೆತಗಳಲ್ಲಿ 3 ಸಿಕ್ಸ್ 80 ರನ್ ಬಾರಿಸಿದ್ದರು. ಆದರೆ 2ನೇ ದಿನದಾಟದ ಆರಂಭದಲ್ಲೇ ಜೋ ರೂಟ್ಗೆ ಸುಲಭ ಕ್ಯಾಚ್ ನೀಡುವ ಮೂಲಕ ಜೈಸ್ವಾಲ್ ಶತಕ ಬಾರಿಸುವ ಅವಕಾಶವನ್ನು ಕೈಚೆಲ್ಲಿಕೊಂಡರು.

ಇದಾದ ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಕೆಎಲ್ ರಾಹುಲ್ ಕಡೆಯಿಂದ ಕೂಡ ಶತಕ ನಿರೀಕ್ಷಿಸಲಾಗಿತ್ತು. ಎಚ್ಚರಿಕೆಯ ಬ್ಯಾಟಿಂಗ್ನೊಂದಿಗೆ ರನ್ ಪೇರಿಸುತ್ತಾ ಸಾಗಿದ ರಾಹುಲ್ 86 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಕೇವಲ 14 ರನ್ಗಳಿಂದ ಶತಕ ವಂಚಿತರಾದರು.

ಇನ್ನು ಆರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ರವೀಂದ್ರ ಜಡೇಜಾ 2ನೇ ದಿನದಾಟದ ಮುಕ್ತಾಯದ ವೇಳೆಗೆ ಅರ್ಧಶತಕ ಪೂರೈಸಿದ್ದರು. ಅಲ್ಲದೆ ಮೂರನೇ ದಿನದಾಟದಲ್ಲಿ ಶತಕ ಪೂರೈಸುವುದನ್ನು ನಿರೀಕ್ಷಿಸಲಾಗಿತ್ತು. ಆದರೆ 180 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 87 ರನ್ ಬಾರಿಸಿ ಜೋ ರೂಟ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆದರು. ಇದರೊಂದಿಗೆ ಕೇವಲ 13 ರನ್ಗಳಿಂದ ಜಡೇಜಾ ಕೂಡ ಶತಕ ವಂಚಿತರಾಗಿ ನಿರಾಸೆ ಮೂಡಿಸಿದರು.

ಈ ಮೂವರ ಅರ್ಧಶತಕಗಳ ನೆರವಿನಿಂದ ಭಾರತ ತಂಡವು ಮೊದಲ ಇನಿಂಗ್ಸ್ನಲ್ಲಿ 436 ರನ್ ಪೇರಿಸಿದೆ. ಈ ಮೂಲಕ ಮೊದಲ ಇನಿಂಗ್ಸ್ನಲ್ಲಿ 190 ರನ್ಗಳ ಬೃಹತ್ ಮುನ್ನಡೆ ಪಡೆದುಕೊಂಡಿದೆ. ಸದ್ಯ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ ಆಡುತ್ತಿದ್ದು, 19 ಓವರ್ಗಳ ಮುಕ್ತಾಯದ ವೇಳೆ 2 ವಿಕೆಟ್ ಕಳೆದುಕೊಂಡು 113 ರನ್ ಕಲೆಹಾಕಿದೆ.