
ಭಾರತ ಮತ್ತು ಸೌತ್ ಆಫ್ರಿಕಾ (India vs South Africa) ನಡುವಣ ಟೆಸ್ಟ್ ಸರಣಿ ಮುಕ್ತಾಯದ ಬೆನ್ನಲ್ಲೇ ಮೂರು ಪಂದ್ಯಗಳ ಏಕದಿನ ಸರಣಿ ಶುರುವಾಗಲಿದೆ. ನವೆಂಬರ್ 30 ರಿಂದ ಆರಂಭವಾಗಲಿರುವ ಈ ಸರಣಿಗೆ ಟೀಮ್ ಇಂಡಿಯಾದ ಇಬ್ಬರು ಪ್ರಮುಖ ಆಟಗಾರರು ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ.

ಭಾರತ ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ಏಕದಿನ ಸರಣಿ ವೇಳೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ. ಮುಂಬರುವ ಟಿ20 ವಿಶ್ವಕಪ್ ಅನ್ನು ಗಮನದಲ್ಲಿರಿಸಿ ಬುಮ್ರಾ ಅವರನ್ನು ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗಿಡಲು ಮುಂದಾಗಿದೆ.

ಹಾಗೆಯೇ ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ವರದಿಯಾಗಿದೆ. ಏಷ್ಯಾಕಪ್ ವೇಳೆ ಗಾಯಗೊಂಡಿದ್ದ ಪಾಂಡ್ಯ ಇದೀಗ ಸಂಪೂರ್ಣ ಫಿಟ್ ಆಗಿದ್ದಾರೆ. ಇದಾಗ್ಯೂ ಟಿ20 ವಿಶ್ವಕಪ್ ಅನ್ನು ಗಮನದಲ್ಲಿರಿಸಿ ಹಾರ್ದಿಕ್ ಪಾಂಡ್ಯ ಅವರಿಗೂ ಹೆಚ್ಚಿನ ವಿಶ್ರಾಂತಿ ನೀಡಲು ಬಿಸಿಸಿಐ ಮುಂದಾಗಿದೆ.

ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಏಕದಿನ ಸರಣಿಯು ನವೆಂಬರ್ 30 ರಿಂದ ಶುರುವಾಗಲಿದೆ. ಮೊದಲ ಪಂದ್ಯವು ರಾಂಚಿಯಲ್ಲಿ ನಡೆದರೆ, ದ್ವಿತೀಯ ಪಂದ್ಯವು ಡಿಸೆಂಬರ್ 3 ರಂದು ರಾಯ್ಪುರದಲ್ಲಿ ನಡೆಯಲಿದೆ. ಇನ್ನು ಮೂರನೇ ಏಕದಿನ ಪಂದ್ಯವು ಡಿಸೆಂಬರ್ 6 ರಂದು ವಿಶಾಖಪಟ್ಟಣದಲ್ಲಿ ಜರುಗಲಿದೆ.

ಭಾರತ ಏಕದಿನ ತಂಡ(ಸಂಭಾವ್ಯ) : ಶುಭ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಧ್ರುವ್ ಜುರೆಲ್, ಶಿವಂ ದುಬೆ.