ಇಂಗ್ಲೆಂಡ್ನಲ್ಲಿ ಬೂಮ್ ಬೂಮ್… ಪಾಕ್ ವೇಗಿಯ ಐತಿಹಾಸಿಕ ದಾಖಲೆ ಕ್ಲೀನ್ ಬೌಲ್ಡ್
IND vs ENG: ಲೀಡ್ಸ್ನಲ್ಲಿ ನಡೆಯುತ್ತಿರುವ ತೆಂಡೂಲ್ಕರ್-ಅ್ಯಂಡರ್ಸನ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ 471 ರನ್ ಕಲೆಹಾಕಿದೆ. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ತಂಡವು ಎರಡನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 209 ರನ್ಗಳಿಸಿದೆ.
Updated on: Jun 22, 2025 | 8:31 AM

ಲೀಡ್ಸ್ನ ಹೆಡಿಂಗ್ಲೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲೇ ಜಸ್ಪ್ರೀತ್ ಬುಮ್ರಾ (Jasprit Bumrah) ಮಾರಕ ದಾಳಿ ಸಂಘಟಿಸಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಯಶಸ್ವಿ ಜೈಸ್ವಾಲ್ (101), ಶುಭ್ಮನ್ ಗಿಲ್ (147) ಹಾಗೂ ರಿಷಭ್ ಪಂತ್ (134) ಅವರ ಶತಕಗಳ ನೆರವಿನೊಂದಿಗೆ ಪ್ರಥಮ ಇನಿಂಗ್ಸ್ನಲ್ಲಿ 471 ರನ್ ಕಲೆಹಾಕಿತು.

ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಮೊದಲ ಓವರ್ನಲ್ಲೇ ಜಸ್ಪ್ರೀತ್ ಬುಮ್ರಾ ಆರಂಭಿಕ ಆಘಾತ ನೀಡಿದ್ದರು. ಮೊದಲ ಓವರ್ನ ಕೊನೆಯ ಎಸೆತದಲ್ಲಿ ಝಾಕ್ ಕ್ರಾಲಿ (4) ವಿಕೆಟ್ ಕಬಳಿಸಿದ ಬುಮ್ರಾ, ಆ ಬಳಿಕ ಬೆನ್ ಡಕೆಟ್ (64) ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಇನ್ನು ದ್ವಿತೀಯ ದಿನದಾಟದ ಅಂತ್ಯದ ವೇಳೆ ಜೋ ರೂಟ್ (28) ವಿಕೆಟ್ ಕಬಳಿಸಿ ಟೀಮ್ ಇಂಡಿಯಾಗೆ ಮೂರನೇ ಯಶಸ್ಸು ತಂದುಕೊಟ್ಟರು.

ಈ ಮೂರು ವಿಕೆಟ್ಗಳೊಂದಿಗೆ ಜಸ್ಪ್ರೀತ್ ಬುಮ್ರಾ ಟೆಸ್ಟ್ ಕ್ರಿಕೆಟ್ನಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ಅದು ಕೂಡ ಪಾಕಿಸ್ತಾನ್ ಲೆಜೆಂಡ್ ವಾಸಿಂ ಅಕ್ರಂ ಅವರ ಭರ್ಜರಿ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ. ಅಂದರೆ ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ ಟೆಸ್ಟ್ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ದಾಖಲೆ ಅಕ್ರಂ ಹೆಸರಿನಲ್ಲಿತ್ತು.

ವಾಸಿಂ ಅಕ್ರಂ ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ (SENA ದೇಶ) ಒಟ್ಟು 55 ಟೆಸ್ಟ್ ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದರು. ಈ ವೇಳೆ ಒಟ್ಟು 146 ವಿಕೆಟ್ ಕಬಳಿದ್ದಾರೆ. ಈ ಮೂಲಕ ಸೇನಾ ದೇಶಗಳಲ್ಲಿ ಅತೀ ಹೆಚ್ಚು ವಿಕೆಟ್ ಕಬಳಿಸಿದ ಏಷ್ಯನ್ ಬೌಲರ್ ಎಂಬ ದಾಖಲೆ ನಿರ್ಮಿಸಿದ್ದರು.

ಇದೀಗ ಈ ದಾಖಲೆ ಮುರಿಯುವಲ್ಲಿ ಜಸ್ಪ್ರೀತ್ ಬುಮ್ರಾ ಯಶಸ್ವಿಯಾಗಿದ್ದಾರೆ. ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ ಈವರೆಗೆ 60 ಇನಿಂಗ್ಸ್ ಆಡಿರುವ ಬುಮ್ರಾ 148 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಸೇನಾ ದೇಶಗಳಲ್ಲಿ ಅತ್ಯಧಿಕ ವಿಕೆಟ್ ಪಡೆದ ಏಷ್ಯಾದ ಬೌಲರ್ ಎಂಬ ಹಿರಿಮೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.




