
ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಟೆಸ್ಟ್ ಕ್ರಿಕೆಟ್ ಆಡಲು ಶುರುವಾಗಿ 7 ವರ್ಷಗಳಾಗಿವೆ. ಈ ಏಳು ವರ್ಷಗಳಲ್ಲಿ ಅವರು 48 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ 48 ಮ್ಯಾಚ್ಗಳಲ್ಲಿ ಬುಮ್ರಾ 91 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಈ ವೇಳೆ ಅವರು ಎಸೆದಿರುವ ಓವರ್ಗಳ ಸಂಖ್ಯೆ 1558.

ಅಂದರೆ ಈವರೆಗೆ ಜಸ್ಪ್ರೀತ್ ಬುಮ್ರಾ ಟೆಸ್ಟ್ ಕ್ರಿಕೆಟ್ನಲ್ಲಿ 9348 ಎಸೆತಗಳನ್ನು ಎಸೆದಿದ್ದಾರೆ. ಇದಾಗ್ಯೂ ಅವರು ಯಾವುದೇ ಇನಿಂಗ್ಸ್ನಲ್ಲಿ 100 ಕ್ಕಿಂತ ಹೆಚ್ಚಿನ ರನ್ ಬಿಟ್ಟು ಕೊಟ್ಟಿರಲಿಲ್ಲ. ಕಳೆದ 90 ಇನಿಂಗ್ಸ್ಗಳಲ್ಲಿ ಅವರ ವಿರುದ್ಧ ಯಾವುದೇ ತಂಡವು ನೂರಕ್ಕಿಂತ ಅಧಿಕ ರನ್ ಕಲೆಹಾಕಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಇಂಗ್ಲೆಂಡ್ ಬ್ಯಾಟರ್ಗಳು ಅಂತಹದೊಂದು ಸಾಧನೆ ಮಾಡಿದ್ದಾರೆ.

ಹೌದು, ಟೆಸ್ಟ್ ಕ್ರಿಕೆಟ್ನಲ್ಲಿ ಇದೇ ಮೊದಲ ಬಾರಿಗೆ ಜಸ್ಪ್ರೀತ್ ಬುಮ್ರಾ ಇನಿಂಗ್ಸ್ವೊಂದರಲ್ಲಿ 100 ಕ್ಕಿಂತ ಅಧಿಕ ರನ್ ಬಿಟ್ಟು ಕೊಟ್ಟಿದ್ದಾರೆ. ಮ್ಯಾಂಚೆಸ್ಟರ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 33 ಓವರ್ಗಳನ್ನು ಎಸೆದಿರುವ ಬುಮ್ರಾ ಬರೋಬ್ಬರಿ 112 ರನ್ ನೀಡಿದ್ದಾರೆ. ಈ ಮೂಲಕ ಕಳೆದ 7 ವರ್ಷಗಳಿಂದ ರನ್ ನೀಡುವುದರಲ್ಲಿ ಶತಕ ಪೂರೈಸದ ಬುಮ್ರಾ ಇದೇ ಮೊದಲ ಬಾರಿ ಮೂರಂಕಿ ರನ್ ಬಿಟ್ಟು ಕೊಟ್ಟಿದ್ದಾರೆ.

ಇದಕ್ಕೂ ಮುನ್ನ ಜಸ್ಪ್ರೀತ್ ಬುಮ್ರಾ ಅತ್ಯಧಿಕ ರನ್ ನೀಡಿದ್ದು ಆಸ್ಟ್ರೇಲಿಯಾ ವಿರುದ್ಧ. 2024 ರಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಬುಮ್ರಾ 28.4 ಓವರ್ಗಳಲ್ಲಿ 99 ರನ್ ನೀಡಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧ 112 ರನ್ ಚಚ್ಚಿಸಿಕೊಳ್ಳುವ ಮೂಲಕ ಮೂರಂಕಿ ಮೊತ್ತ ನೀಡಿದ ಬೌಲರ್ಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಇತ್ತ ಇದೇ ಮೊದಲ ಬಾರಿಗೆ ಇನಿಂಗ್ಸ್ವೊಂದರಲ್ಲಿ ಮೂರಂಕಿ ಮೊತ್ತದ ರನ್ ಬಿಟ್ಟು ಕೊಟ್ಟರೂ 45 ಟೆಸ್ಟ್ ಪಂದ್ಯಗಳನ್ನಾಡಿ ಅತ್ಯುತ್ತಮ ಎಕಾನಮಿ ಹೊಂದಿರುವ ಭಾರತದ ಟೆಸ್ಟ್ ಬೌಲರ್ಗಳ ಪಟ್ಟಿಯಲ್ಲಿ ಜಸ್ಪ್ರೀತ್ ಬುಮ್ರಾ ಅಗ್ರಸ್ಥಾನದಲ್ಲಿದ್ದಾರೆ. ಬುಮ್ರಾ 48 ಟೆಸ್ಟ್ ಪಂದ್ಯಗಳಲ್ಲಿ ಓವರ್ಗೆ ಕೇವಲ 2.79 ಸರಾಸರಿಯಲ್ಲಿ ಮಾತ್ರ ರನ್ ನೀಡಿದ್ದಾರೆ. ಅಲ್ಲದೆ ಇದರ ನಡುವೆ 219 ವಿಕೆಟ್ಗಳನ್ನು ಸಹ ಕಬಳಿಸಿದ್ದಾರೆ.