- Kannada News Photo gallery Cricket photos Jasprit Bumrah reached another huge milestone as he reached 100 wickets in Tests away from home
Jasprit Bumrah Record: ಬುಮ್ರಾ ಖಾತೆಗೆ ಮತ್ತೊಂದು ದಾಖಲೆ: ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಮೈಲಿಗಲ್ಲು ತಲುಪಿದ ಜಸ್ಪ್ರೀತ್
South Africa vs India: ವೇಗಿಗಳು ಸೆಂಚುರಿಯನ್ ಪಿಚ್ನಲ್ಲಿ ಬೆಂಕಿಯ ಚೆಂಡು ಉಗುಳುತ್ತಿದ್ದು ವಿಕೆಟ್ ಮೇಲೆ ವಿಕೆಟ್ ಪಡೆದುಕೊಳ್ಳುತ್ತಿದ್ದಾರೆ. ಹೀಗಿರುವಾಗ ಜಸ್ಪ್ರೀತ್ ಬುಮ್ರಾ ವಿದೇಶದಲ್ಲಿ ನಡೆದ ಟೆಸ್ಟ್ ಕ್ರಿಕೆಟ್ನಲ್ಲಿ 100 ವಿಕೆಟ್ ಪಡೆದ ದಾಖಲೆಗೆ ಪಾತ್ರರಾಗಿದ್ದಾರೆ.
Updated on: Dec 30, 2021 | 9:45 AM

ಸೆಂಚುರಿಯನ್ನ ಸೂಪರ್ ಪಾರ್ಕ್ನಲ್ಲಿ ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಟೆಸ್ಟ್ ಪಂದ್ಯ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಐದನೇ ದಿನದಾಟದ ಮೇಲೆ ಉಭಯ ತಂಡಗಳ ಗೆಲುವಿನ ಭವಿಷ್ಯ ನಿಂತಿದೆ. ಇದರ ನಡುವೆ ಟೀಮ್ ಇಂಡಿಯಾದ ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಟೆಸ್ಟ್ ಕ್ರಿಕೆಟ್ನಲ್ಲಿ ನೂತನ ಸಾಧನೆ ಮಾಡಿದ್ದಾರೆ.

ಹೌದು, ವೇಗಿಗಳು ಈ ಪಿಚ್ನಲ್ಲಿ ಬೆಂಕಿಯ ಚೆಂಡು ಉಗುಳುತ್ತಿದ್ದು ವಿಕೆಟ್ ಮೇಲೆ ವಿಕೆಟ್ ಪಡೆದುಕೊಳ್ಳುತ್ತಿದ್ದಾರೆ. ಹೀಗಿರುವಾಗ ಜಸ್ಪ್ರೀತ್ ಬುಮ್ರಾ ವಿದೇಶದಲ್ಲಿ ನಡೆದ ಟೆಸ್ಟ್ ಕ್ರಿಕೆಟ್ನಲ್ಲಿ 100 ವಿಕೆಟ್ ಪಡೆದ ದಾಖಲೆಗೆ ಪಾತ್ರರಾಗಿದ್ದಾರೆ.

ಸೆಂಚುರಿಯನ್ನ ಸೂಪರ್ಸ್ಪೋರ್ಟ್ ಪಾರ್ಕ್ನಲ್ಲಿ ನಡೆಯುತ್ತಿರುವ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ನ 4ನೇ ದಿನವಾದ ಬುಧವಾರ ಬುಮ್ರಾ ಈ ಸಾಧನೆ ಮಾಡಿದರು.

ವಾನ್ ಡೆರ್ ಡಸೆನ್ ವಿಕೆಟ್ ಪಡೆಯುತ್ತಿದ್ದಂತೆ ಬುಮ್ರಾ ಈ 10 ವಿಕೆಟ್ ಕಿತ್ತ ಸಾಧನೆ ಮಾಡಿದರು. 28ರ ಹರೆಯದ ವೇಗಿ ಒಟ್ಟಾರೆ 25 ಟೆಸ್ಟ್ ಪಂದ್ಯಗಳಿಂದ 105 ವಿಕೆಟ್ ಕಬಳಿಸಿದ್ದು, ಅದರಲ್ಲಿ 101 ಬಲಿಗಳು ವಿದೇಶಗಳಲ್ಲೇ ಲಭಿಸಿರುವುದು ವಿಶೇಷವಾಗಿದೆ. 2018ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ಗೆ ಪದಾರ್ಪಣೆ ಮಾಡಿದ ಬುಮ್ರಾ 25ರಲ್ಲಿ 23 ಪಂದ್ಯಗಳನ್ನು ಭಾರತದಿಂದಾಚೆಗೆ ಆಡಿದ್ದಾರೆ.

ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಬಿಗುವಿನ ದಾಳಿ ನಡೆಸಿದ ಬುಮ್ರಾ, ಅಂತಿಮ ಅರ್ಧ ಗಂಟೆ ಅವಧಿಯಲ್ಲಿ ಎರಡು ವಿಕೆಟ್ ಕಬಳಿಸಿ ಭಾರತದ ಮೇಲುಗೈಗೆ ಕಾರಣರಾದರು.

ಬುಮ್ರಾ ಹಾಕಿದ 36ನೇ ಓವರ್ನ 4ನೇ ಎಸೆತದ ಲಯ ಅಂದಾಜಿಸುವಲ್ಲಿ ಎಡವಿದ ವ್ಯಾನ್ ಡೆರ್ ಡಸೆನ್ ಬೌಲ್ಡ್ ಆದರು. ಬಳಿಕ ದಿನದಾಟದ ಅಂತ್ಯಕ್ಕೆ ಇನ್ನೂ ಒಂದು ಎಸೆತ ಬಾಕಿ ಇರುವಾಗ ಮಾರಕ ಯಾರ್ಕರ್ ಮೂಲಕ ನೈಟ್ವಾಚ್ಮನ್ ಕೇಶವ್ ಮಹಾರಾಜ್ ವಿಕೆಟ್ ಪಡೆದು ದ.ಆಫ್ರಿಕಾಗೆ ಬುಮ್ರಾ ಶಾಕ್ ನೀಡಿದರು.

ಸದ್ಯ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಟೆಸ್ಟ್ ಪಂದ್ಯದ ಅಂತಿಮ ದಿನದಾಟ ವೀಕ್ಷಿಸಲು ಇಡೀ ಕ್ರಿಕೆಟ್ ಜಗತ್ತೇ ಕಾತುರದಲ್ಲಿದೆ. ಆಫ್ರಿಕಾಕ್ಕೆ 305 ರನ್ ಗುರಿ ನೀಡಿರುವ ಭಾರತ ಈ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡವಾಗಿದೆ. ಹೀಗಾದಲ್ಲಿ ವಿರಾಟ್ ಕೊಹ್ಲಿ ಪಡೆ ಇತಿಹಾಸ ಸೃಷ್ಟಿಸಲಿದೆ. ಸದ್ಯಕ್ಕೆ ಟೀಮ್ ಇಂಡಿಯಾ ಗೆಲುವಿಗೆ ಆಫ್ರಿಕಾರನ್ನರ 6 ವಿಕೆಟ್ಗಳು ಬೇಕಿದ್ದರೆ ಇತ್ತ ಹರಿಣಗಳ ಗೆಲುವಿಗೆ 211 ರನ್ಗಳ ಅವಶ್ಯಕತೆಯಿದೆ.
