
ಐಸಿಸಿ ಪ್ರಕಟಿಸಿರುವ ಟೆಸ್ಟ್ ಬೌಲರ್ಗಳ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಅಗ್ರಸ್ಥಾನ ಅಲಂಕರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಬುಮ್ರಾ ಇದೀಗ 881 ಅಂಕಗಳೊಂದಿಗೆ ನಂಬರ್ 1 ಬೌಲರ್ ಆಗಿ ಹೊರಹೊಮ್ಮಿದ್ದಾರೆ.

ಇದರೊಂದಿಗೆ ಕ್ರಿಕೆಟ್ ಇತಿಹಾಸದಲ್ಲೇ ಮೂರು ಸ್ವರೂಪಗಳಲ್ಲೂ ಅಗ್ರಸ್ಥಾನ ಅಲಂಕರಿಸಿದ ವಿಶ್ವದ ಮೊದಲ ಬೌಲರ್ ಎಂಬ ದಾಖಲೆ ಜಸ್ಪ್ರೀತ್ ಬುಮ್ರಾ ಪಾಲಾಗಿದೆ. ಅಲ್ಲದೆ ಈ ಸಾಧನೆ ಮಾಡಿದ ಭಾರತದ 2ನೇ ಆಟಗಾರ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಜಸ್ಪ್ರೀತ್ ಬುಮ್ರಾ 2022 ರಲ್ಲಿ ಏಕದಿನ ಮತ್ತು ಟಿ20 ಕ್ರಿಕೆಟ್ ಬೌಲರ್ಗಳ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಅಲಂಕರಿಸಿದ್ದರು. ಇದೀಗ ಟೆಸ್ಟ್ ಕ್ರಿಕೆಟ್ನಲ್ಲೂ ನಂಬರ್ 1 ಬೌಲರ್ ಆಗಿ ಕಾಣಿಸಿಕೊಳ್ಳುವ ಮೂಲಕ ಮೂರು ಸ್ವರೂಪಗಳಲ್ಲೂ ಅಗ್ರಸ್ಥಾನಿಯಾಗಿ ಕಾಣಿಸಿಕೊಂಡ ಮೊದಲ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಹಾಗೆಯೇ ಈ ಸಾಧನೆ ಮಾಡಿದ ಭಾರತದ 2ನೇ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಮೂರು ಸ್ವರೂಪಗಳ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ ವಿಶೇಷ ದಾಖಲೆಯೊಂದನ್ನು ವಿರಾಟ್ ಕೊಹ್ಲಿ ಬರೆದಿದ್ದರು. ಕಿಂಗ್ ಕೊಹ್ಲಿ ಟಿ20, ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ಯಾರ್ಕಿಂಗ್ನಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದರು.

ಇದೀಗ ಜಸ್ಪ್ರೀತ್ ಬುಮ್ರಾ ಕೂಡ ಮೂರು ಸ್ವರೂಪಗಳ ಶ್ರೇಯಾಂಕ ಪಟ್ಟಿಯಲ್ಲೂ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಬಳಿಕ ಮೂರು ಮಾದರಿಯಲ್ಲೂ ನಂಬರ್ 1 ಸ್ಥಾನ ಅಲಂಕರಿಸಿದ ಭಾರತದ 2ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪ್ರಸ್ತುತ ಐಸಿಸಿ ಟೆಸ್ಟ್ ಬೌಲರ್ಗಳ ಶ್ರೇಯಾಂಕ ಪಟ್ಟಿಯಲ್ಲಿ ಜಸ್ಪ್ರೀತ್ ಬುಮ್ರಾ (881 ಅಂಕಗಳು) ಅಗ್ರಸ್ಥಾನದಲ್ಲಿದ್ದರೆ, ಸೌತ್ ಆಫ್ರಿಕಾದ ಕಗಿಸೊ ರಬಾಡ (851 ಅಂಕಗಳು) ದ್ವಿತೀಯ ಸ್ಥಾನದಲ್ಲಿದ್ದಾರೆ. ಹಾಗೆಯೇ ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (841 ಅಂಕಗಳು) ತೃತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ವೇಗಿಗಳಾದ ಪ್ಯಾಟ್ ಕಮಿನ್ಸ್ (828 ಅಂಕಗಳು) ಹಾಗೂ ಜೋಶ್ ಹ್ಯಾಝಲ್ವುಡ್ (818 ಅಂಕಗಳು) ಕ್ರಮವಾಗಿ 4ನೇ ಮತ್ತು 5ನೇ ಸ್ಥಾನಗಳಲ್ಲಿದ್ದಾರೆ.