T20 World Cup 2024: ಈ ಸಲ ವಿಶ್ವಕಪ್ ನಮ್ದೆ: ಜಯ್ ಶಾ
TV9 Web | Updated By: ಝಾಹಿರ್ ಯೂಸುಫ್
Updated on:
Feb 15, 2024 | 7:59 AM
T20 World Cup 2024: ವೆಸ್ಟ್ ಇಂಡೀಸ್-ಯುಎಸ್ಎ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಹಾಗೆಯೇ ಮುಂಬರುವ ಸರಣಿಗಳಲ್ಲೂ ಭಾರತ ತಂಡದ ನಾಯಕರಾಗಿ ರೋಹಿತ್ ಮುಂದುವರೆಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.
1 / 5
ಮುಂಬರುವ ಟಿ20 ವಿಶ್ವಕಪ್ನಲ್ಲಿ (T20 World Cup 2024) ಟೀಮ್ ಇಂಡಿಯಾವನ್ನು ರೋಹಿತ್ ಶರ್ಮಾ (Rohit Sharma) ಮುನ್ನಡೆಸುವುದು ಖಚಿತವಾಗಿದೆ. ಅದರಂತೆ ಹಿಟ್ಮ್ಯಾನ್ ನಾಯಕತ್ವದಲ್ಲಿ ಈ ಬಾರಿ ಭಾರತ ತಂಡವು ವಿಶ್ವಕಪ್ ಗೆಲ್ಲಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2 / 5
ಏಕದಿನ ವಿಶ್ವಕಪ್ ಫೈನಲ್ ಸೋಲಿನ ಬೆನ್ನಲ್ಲೇ ಟಿ20 ವಿಶ್ವಕಪ್ನಲ್ಲಿ ಭಾರತ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ ಎನ್ನಲಾಗಿತ್ತು. ಆದರೀಗ ಟಿ20 ವಿಶ್ವಕಪ್ನಲ್ಲೂ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲೇ ಭಾರತ ತಂಡ ಕಣಕ್ಕಿಳಿಯಲಿದೆ ಎಂಬುದನ್ನು ಜಯ್ ಶಾ ಸ್ಪಷ್ಟಪಡಿಸಿದ್ದಾರೆ.
3 / 5
ಬುಧವಾರ ನಡೆದ ಎಸ್‌ಸಿಎ ಸ್ಟೇಡಿಯಂ ಮರುನಾಮಕರಣ ಕಾರ್ಯಕ್ರಮದಲ್ಲಿ ಮಾತನಾಡಿದ ಜಯ್ ಶಾ, ನಾವು 2023 ರ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಸೋತಿರಬಹುದು. ಆದರೆ ಸತತವಾಗಿ 10 ಪಂದ್ಯಗಳನ್ನು ಗೆಲ್ಲುವ ಮೂಲಕ ನಾವು ಎಲ್ಲರ ಹೃದಯಗಳನ್ನು ಗೆದ್ದಿದ್ದೇವೆ. ಅದರಂತೆ ಬಾರ್ಬಡೋಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಭಾರತವು ಟಿ20 ವಿಶ್ವಕಪ್ ಎತ್ತಿ ಹಿಡಿಯುವ ವಿಶ್ವಾಸವಿದೆ ಎಂದು ಜಯ್ ಶಾ ಹೇಳಿದರು.
4 / 5
ಅಷ್ಟೇ ಅಲ್ಲದೆ ಮೂರು ಮಾದರಿಯಲ್ಲೂ ರೋಹಿತ್ ಶರ್ಮಾ ನಾಯಕರಾಗಿ ಉಳಿಯಲಿದ್ದಾರೆ ಎಂದು ತಿಳಿಸಿದ ಜಯ್ ಶಾ, ಸದ್ಯದ ಮಟ್ಟಿಗೆ ನಾಯಕತ್ವದ ಬದಲಾವಣೆ ಬಗ್ಗೆ ಚರ್ಚಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಟಿ20 ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಕಣಕ್ಕಿಳಿಯುವುದನ್ನು ಖಚಿತಪಡಿಸಿದರು.
5 / 5
ಈ ಬಾರಿಯ ಟಿ20 ವಿಶ್ವಕಪ್ ಜೂನ್ 1 ರಿಂದ ಶುರುವಾಗಲಿದೆ. ವೆಸ್ಟ್ ಇಂಡೀಸ್ ಮತ್ತು ಯುಎಸ್ಎನಲ್ಲಿ ನಡೆಯಲಿರುವ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಕೆನಡಾ ಮತ್ತು ಯುಎಸ್ಎ ಮುಖಾಮುಖಿಯಾಗಲಿದೆ. ಇನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಜೂನ್ 9 ರಂದು ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಜೂನ್ 29 ರಂದು ಫೈನಲ್ ಪಂದ್ಯ ಜರುಗಲಿದೆ.
Published On - 7:30 am, Thu, 15 February 24