- Kannada News Photo gallery Cricket photos Ravindra Jadeja fit and available for the Rajkot Test against England
Ravindra Jadeja: ರವೀಂದ್ರ ಜಡೇಜಾ ಆಡ್ತಾರಾ, ಇಲ್ವಾ? ಇಲ್ಲಿದೆ ಮಾಹಿತಿ
India vs England 3rd Test: ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯವು ಫೆಬ್ರವರಿ 15 ರಿಂದ ಶುರುವಾಗಲಿದೆ. ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಕಣಕ್ಕಿಳಿಯಲಿದ್ದಾರಾ ಎಂಬುದೇ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
Updated on: Feb 14, 2024 | 9:53 AM

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ಕಣಕ್ಕಿಳಿಯುವುದು ಖಚಿತವಾಗಿದೆ. ಮೊದಲ ಟೆಸ್ಟ್ ಪಂದ್ಯದ ವೇಳೆ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದ ಜಡೇಜಾ 2ನೇ ಪಂದ್ಯಕ್ಕೆ ಅಲಭ್ಯರಾಗಿದ್ದರು. ಅಲ್ಲದೆ ಕಳೆದ ಒಂದು ವಾರದಿಂದ ಅವರು ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಹೀಗಾಗಿ ರವೀಂದ್ರ ಜಡೇಜಾ ಮೂರನೇ ಟೆಸ್ಟ್ ಪಂದ್ಯಕ್ಕೆ ಲಭ್ಯರಿರಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು. ಇದೀಗ ಈ ಪ್ರಶ್ನೆಗೆ ಟೀಮ್ ಇಂಡಿಯಾ ಆಟಗಾರ ಕುಲ್ದೀಪ್ ಯಾದವ್ ಸ್ಪಷ್ಟ ಉತ್ತರ ನೀಡಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಲ್ದೀಪ್ ಯಾದವ್, ಕಳೆದೆರಡು ದಿನಗಳಿಂದ ರವೀಂದ್ರ ಜಡೇಜಾ ಅಭ್ಯಾಸ ನಡೆಸುತ್ತಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಎಂದಿನಂತೆ ಪ್ರಾಕ್ಟೀಸ್ ಮಾಡಿದ್ದಾರೆ. ಹೀಗಾಗಿ ರಾಜ್ಕೋಟ್ ಟೆಸ್ಟ್ ಪಂದ್ಯದಲ್ಲಿ ಅವರು ಕಣಕ್ಕಿಳಿಯಲಿದ್ದಾರೆ ಎಂದು ತಿಳಿಸಿದ್ದಾರೆ.

ಇದಾಗ್ಯೂ ಈ ಪಂದ್ಯಕ್ಕೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಅಲಭ್ಯರಾಗಿದ್ದಾರೆ. ತೊಡೆಸಂಧು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ರಾಹುಲ್ ಸದ್ಯ ಎನ್ಸಿಎನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಅವರು ಮೂರನೇ ಪಂದ್ಯದಿಂದ ಹೊರಗುಳಿದಿದ್ದಾರೆ.

ಕೆಎಲ್ ರಾಹುಲ್ ಅವರ ಅನುಪಸ್ಥಿತಿಯಲ್ಲಿ ಅವರ ಬದಲಿ ಆಟಗಾರನಾಗಿ ಕರ್ನಾಟಕದ ಯುವ ಎಡಗೈ ದಾಂಡಿಗ ದೇವದತ್ ಪಡಿಕ್ಕಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇದಾಗ್ಯೂ ಅವರಿಗೆ ಮೂರನೇ ಟೆಸ್ಟ್ ಪಂದ್ಯದಲ್ಲಿ ಅವಕಾಶ ಸಿಗುವುದು ಅನುಮಾನ.

ಏಕೆಂದರೆ ಇದಕ್ಕೂ ಮುನ್ನ ತಂಡಕ್ಕೆ ಆಯ್ಕೆಯಾಗಿರುವ ಸರ್ಫರಾಝ್ ಖಾನ್ ಹಾಗೂ ಧ್ರುವ್ ಜುರೇಲ್ ಚೊಚ್ಚಲ ಅವಕಾಶವನ್ನು ಎದುರು ನೋಡುತ್ತಿದ್ದಾರೆ. ಹೀಗಾಗಿ ರಾಜ್ಕೋಟ್ ಟೆಸ್ಟ್ ಪಂದ್ಯದಲ್ಲಿ ಸರ್ಫರಾಝ್ ಮತ್ತು ಧ್ರುವ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಸರ್ಫರಾಝ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ*, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.














