Joe Root: ನೂರು ರನ್ ಬಾರಿಸಿ ಮೂರು ದಾಖಲೆ ಬರೆದ ಜೋ ರೂಟ್
TV9 Web | Updated By: ಝಾಹಿರ್ ಯೂಸುಫ್
Updated on:
Jun 17, 2023 | 7:08 PM
Ashes 2023 England vs Australia: ಇಂಗ್ಲೆಂಡ್ ಪರ ಅತೀ ಹೆಚ್ಚು ಬಾರಿ ಅತ್ಯಧಿಕ ಸ್ಕೋರ್ಗಳಿಸಿದ ದಾಖಲೆ ಜೋ ರೂಟ್ ಪಾಲಾಗಿದೆ. ಈ ಹಿಂದೆ ಈ ದಾಖಲೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಅಲಿಸ್ಟರ್ ಕುಕ್ ಹೆಸರಿನಲ್ಲಿತ್ತು.
1 / 7
Ashes 2023: ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಜೋ ರೂಟ್ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
2 / 7
ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಝಾಕ್ ಕ್ರಾಲಿ (61) ಉತ್ತಮ ಆರಂಭ ಒದಗಿಸಿದ್ದರು. ಆದರೆ ಮತ್ತೊಂದೆಡೆ ಬೆನ್ ಡಕೆಟ್ (12) ಹಾಗೂ ಅಲಿ ಪೋಪ್ (31) ಬೇಗನೆ ವಿಕೆಟ್ ಒಪ್ಪಿಸಿದರು.
3 / 7
ಈ ಹಂತದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೋ ರೂಟ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ್ದ ರೂಟ್ ಸ್ವಿಚ್ ಹಿಟ್ಗಳ ಮೂಲಕ ಗಮನ ಸೆಳೆದರು. ಅಲ್ಲದೆ ಆಸೀಸ್ ವೇಗಿಗಳನ್ನು ಮನಸೊ ಇಚ್ಛೆ ದಂಡಿಸುವ ಮೂಲಕ 152 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 7 ಫೋರ್ನೊಂದಿಗೆ ಅಜೇಯ 118 ರನ್ ಬಾರಿಸಿದರು. ಈ ಹಂತದಲ್ಲಿ ಇಂಗ್ಲೆಂಡ್ ತಂಡವು 393/8 ರನ್ಗಳಿಗೆ ಡಿಕ್ಲೇರ್ ಘೋಷಿಸಿತು.
4 / 7
ವಿಶೇಷ ಎಂದರೆ ಈ ಅಜೇಯ ಶತಕದೊಂದಿಗೆ ಜೋ ರೂಟ್ ಮೂರು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ದಾಖಲೆಗಳಾವುವು ಎಂಬುದರ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ...
5 / 7
1- ಅತ್ಯಧಿಕ ಶತಕ: ಇಂಗ್ಲೆಂಡ್ ಪರ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅತೀ ಹೆಚ್ಚು ಟೆಸ್ಟ್ ಶತಕ ಬಾರಿಸಿದ ದಾಖಲೆಯನ್ನು ಜೋ ರೂಟ್ ಸರಿಗಟ್ಟಿದ್ದಾರೆ. ಈ ಹಿಂದೆ ಕೆವಿನ್ ಪೀಟರ್ಸನ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ 19 ಶತಕ ಬಾರಿಸಿದ್ದರು. ಇದೀಗ 19 ಶತಕಗಳೊಂದಿಗೆ ಈ ದಾಖಲೆ ಸರಿಗಟ್ಟಿರುವುದು ವಿಶೇಷ.
6 / 7
2- ಶತಕ ವೀರ: ಪ್ರಸ್ತುತ ಸಕ್ರೀಯ ಆಟಗಾರರಲ್ಲಿ ಅತೀ ಹೆಚ್ಚು ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಜೋ ರೂಟ್ 2ನೇ ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ 75 ಶತಕಗಳೊಂದಿಗೆ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದರೆ, ಇದೀಗ 46 ಸೆಂಚುರಿಗಳೊಂದಿಗೆ ಜೋ ರೂಟ್ ದ್ವಿತೀಯ ಸ್ಥಾನದಲ್ಲಿದ್ದಾರೆ.
7 / 7
3- ಟಾಪ್ ಸ್ಕೋರರ್: ಇಂಗ್ಲೆಂಡ್ ಪರ ಅತೀ ಹೆಚ್ಚು ಬಾರಿ ಅತ್ಯಧಿಕ ಸ್ಕೋರ್ಗಳಿಸಿದ ದಾಖಲೆ ಜೋ ರೂಟ್ ಪಾಲಾಗಿದೆ. ಈ ಹಿಂದೆ ಈ ದಾಖಲೆ ಇಂಗ್ಲೆಂಡ್ ಮಾಜಿ ನಾಯಕ ಅಲಿಸ್ಟರ್ ಕುಕ್ ಹೆಸರಿನಲ್ಲಿತ್ತು. ಕುಕ್ 291 ಇನಿಂಗ್ಸ್ಗಳಲ್ಲಿ ಒಟ್ಟು 58 ಬಾರಿ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದ್ದರು. ಇದೀಗ ಭರ್ಜರಿ ಶತಕದೊಂದಿಗೆ ಜೋ ರೂಟ್ 239 ಇನಿಂಗ್ಸ್ಗಳಲ್ಲಿ ಒಟ್ಟು 59 ಬಾರಿ ಅತ್ಯಧಿಕ ಸ್ಕೋರ್ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ.