Virat Kohli vs Naveen-ul-Haq: ನಾನಲ್ಲ, ಜಗಳ ಶುರು ಮಾಡಿದ್ದೇ ಕೊಹ್ಲಿ ಎಂದ ನವೀನ್ ಉಲ್ ಹಕ್
Virat Kohli vs Naveen-ul-Haq: ನವೀನ್ ಉಲ್ ಹಕ್ ಬ್ಯಾಟಿಂಗ್ ಮಾಡುವ ವೇಳೆ ಶುರುವಾಗಿದ್ದ ಈ ಮಾತಿನ ಚಕಮಕಿ ಆ ಬಳಿಕ ಪಂದ್ಯ ಮುಗಿದ ಬಳಿಕ ಮುಂದುವರೆಯಿತು.
Updated on: Jun 17, 2023 | 9:23 PM

ಐಪಿಎಲ್ ಸೀಸನ್ 16 ರಲ್ಲಿ ಅತೀ ಹೆಚ್ಚು ಸುದ್ದಿಯಾದ ವಿವಾದ ಎಂದರೆ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡುವಣ ಮಾತಿನ ಚಕಮಕಿ. ಲಕ್ನೋದಲ್ಲಿ ನಡೆದ ಪಂದ್ಯದ ವೇಳೆ ಕಿಂಗ್ ಕೊಹ್ಲಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಆಟಗಾರ ನವೀನ್ ಉಲ್ ಹಕ್ ನಡುವೆ ವಾಗ್ವಾದ ಏರ್ಪಟ್ಟಿತ್ತು.

ನವೀನ್ ಉಲ್ ಹಕ್ ಬ್ಯಾಟಿಂಗ್ ಮಾಡುವ ವೇಳೆ ಶುರುವಾಗಿದ್ದ ಈ ಮಾತಿನ ಚಕಮಕಿ ಆ ಬಳಿಕ ಪಂದ್ಯ ಮುಗಿದ ಬಳಿಕ ಮುಂದುವರೆಯಿತು. ಅದರಲ್ಲೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಕೂಡ ಈ ವಾಗ್ವಾದದಲ್ಲಿ ಸೇರ್ಪಡೆಯಾಗುವುದರೊಂದಿಗೆ ಪರಿಸ್ಥಿತಿ ಬಿಗಡಾಯಿಸಿತು.

ಇದಾದ ಬಳಿಕ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ಗೆ ಪಂದ್ಯ ಶುಲ್ಕದ ಶೇ.100 ರಷ್ಟು ದಂಡ ವಿಧಿಸಿದರೆ, ನವೀನ್ ಉಲ್ ಹಕ್ಗೆ ಪಂದ್ಯ ಶುಲ್ಕದ ಶೇ.50 ರಷ್ಟು ಫೈನ್ ಹಾಕಲಾಗಿತ್ತು. ಇದೀಗ ಈ ಘಟನೆಯ ಬಗ್ಗೆ ನವೀನ್ ಉಲ್ ಹಕ್ ಮನಬಿಚ್ಚಿ ಮಾತನಾಡಿದ್ದಾರೆ.

ಖಾಸಗಿ ಚಾನೆಲ್ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನವೀನ್, ಐಪಿಎಲ್ನಲ್ಲಿನ ಜಗಳಕ್ಕೆ ಮುಖ್ಯ ಕಾರಣ ವಿರಾಟ್ ಕೊಹ್ಲಿ. ಅವರೇ ಜಗಳವನ್ನು ಶುರು ಮಾಡಿದ್ದರು. ಅಲ್ಲಿ ನನ್ನದೇನು ತಪ್ಪಿರಲಿಲ್ಲ ಎಂದು ಅಫ್ಘಾನ್ ಆಟಗಾರ ಹೇಳಿದ್ದಾರೆ.

ಅಂದು ಮ್ಯಾಚ್ ಮುಗಿದ ಬಳಿಕ ಶೇಕ್ ಹ್ಯಾಂಡ್ ನೀಡುವಾದ ವಿರಾಟ್ ಕೊಹ್ಲಿಯೇ ಜಗಳ ಶುರು ಮಾಡಿದ್ದರು. ನೀವು ಬೇಕಿದ್ರೆ ಫೈನ್ ಹಾಕಿರುವುದನ್ನು ಗಮನಿಸಿ, ಆಗ ಜಗಳ ಪ್ರಾರಂಭ ಮಾಡಿರುವುದು ಯಾರು ಅಂತ ಗೊತ್ತಾಗುತ್ತೆ ಎಂದು ನವೀನ್ ಉಲ್ ಹಕ್ ಹೇಳಿದ್ದಾರೆ.

ಇನ್ನು ನಾನು ಸ್ಲೆಡ್ಜ್ ಮಾಡಲ್ಲ. ಒಂದು ವೇಳೆ ಬ್ಯಾಟರ್ಗಳನ್ನು ಕೆಣಕುವ ಪ್ರಯತ್ನ ಮಾಡಿದರೆ ಅದು ಬೌಲಿಂಗ್ ಮಾಡುವ ವೇಳೆ ಮಾತ್ರ. ಮ್ಯಾಚ್ ಮುಗಿದ ಬಳಿಕ ಯಾರೊಂದಿಗೂ ಜಗಳಕ್ಕಿಯಲ್ಲ. ಆದರೆ ಆರ್ಸಿಬಿ ವಿರುದ್ಧದ ಆ ಪಂದ್ಯದ ವೇಳೆ ನಾನು ಸ್ಲೆಡ್ಜ್ ಕೂಡ ಮಾಡಿರಲಿಲ್ಲ ಎಂದು ನವೀನ್ ಹೇಳಿದ್ದಾರೆ.

ಅಂದರೆ ನಾನು ಯಾವುದೇ ಸ್ಲೆಡ್ಜ್ ಮಾಡದಿದ್ದರೂ, ವಿರಾಟ್ ಕೊಹ್ಲಿಯೇ ನನ್ನೊಂದಿಗೆ ಜಗಳ ಶುರು ಹಚ್ಚಿಕೊಂಡಿದ್ದರು. ಪಂದ್ಯದ ಮುಗಿದ ಬಳಿಕ ಕೂಡ ನನ್ನ ಕೈ ಹಿಡಿದು ಮತ್ತೆ ವಾಗ್ವಾದಕ್ಕೆ ಇಳಿದಿದ್ದರು. ಇದರಲ್ಲಿ ನನ್ನ ತಪ್ಪೇನು ಇಲ್ಲ ಎಂಬ ವಾದವನ್ನು ನವೀನ್ ಉಲ್ ಹಕ್ ಮಂಡಿಸಿದ್ದಾರೆ.

ಒಟ್ಟಿನಲ್ಲಿ ಐಪಿಎಲ್ ಸೀಸನ್ 16 ಮೂಲಕ ಹಲವು ಆಟಗಾರರು ವಿಭಿನ್ನ ದಾಖಲೆಗಳ ಮೂಲಕ ಗಮನ ಸೆಳೆದರೆ, ನವೀನ್ ಉಲ್ ಹಕ್ ಕಿಂಗ್ ಕೊಹ್ಲಿ ಜೊತೆ ಕಿರಿಕ್ ಮಾಡಿಕೊಂಡು ಸಖತ್ ಫೇಮಸ್ ಆಗಿರುವುದಂತು ನಿಜ.
