ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್ ಜೋ ರೂಟ್ ಕಡೆಯಿಂದ ಮತ್ತೊಂದು ಶತಕ ಮೂಡಿಬಂದಿದೆ. ಆದರೆ ಈ ಬಾರಿ ಮೂಡಿಬಂದಿರುವ ಶತಕ ಬರೋಬ್ಬರಿ 6 ವರ್ಷಗಳ ಬಳಿಕ ಎಂಬುದು ವಿಶೇಷ. ಅಂದರೆ ಏಕದಿನ ಕ್ರಿಕೆಟ್ನಲ್ಲಿ ರೂಟ್ ಶತಕ ಬಾರಿಸಿ 2083 ದಿನಗಳು ಕಳೆದಿದ್ದವು.
ಈ 2083 ದಿನಗಳಲ್ಲಿ ಜೋ ರೂಟ್ ಇಂಗ್ಲೆಂಡ್ ಪರ 39 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 8 ಅರ್ಧಶತಕಗಳೊಂದಿಗೆ ಒಟ್ಟು 1123 ರನ್ಗಳನ್ನು ಸಹ ಕಲೆಹಾಕಿದ್ದಾರೆ. ಇದಾಗ್ಯೂ ಅವರ ಬ್ಯಾಟ್ನಿಂದ ಮೂರಂಕಿ ಮೊತ್ತ ಮೂಡಿಬಂದಿರಲಿಲ್ಲ.
ಇದೀಗ 6 ವರ್ಷಗಳ ಬಳಿಕ ಜೋ ರೂಟ್ ಸೆಂಚುರಿ ಸಿಡಿಸಿದ್ದಾರೆ. ಲಾಹೋರ್ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ರೂಟ್ 111 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ ಆಕರ್ಷಕ ಶತಕ ಬಾರಿಸಿದ್ದಾರೆ. ಈ ಮೂಲಕ ಕಳೆದ ಆರು ವರ್ಷಗಳ ಏಕದಿನ ಶತಕದ ಬರವನ್ನು ನೀಗಿಸಿದ್ದಾರೆ.
ಇದಕ್ಕೂ ಮುನ್ನ ಜೋ ರೂಟ್ ಏಕದಿನ ಕ್ರಿಕೆಟ್ನಲ್ಲಿ ಶತಕ ಸಿಡಿಸಿದ್ದು 2019 ರಲ್ಲಿ. ಸೌತಾಂಪ್ಟನ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ರೂಟ್ 94 ಎಸೆತಗಳಲ್ಲಿ ಅಜೇಯ ಶತಕ ಬಾರಿಸಿದ್ದರು. ಆ ಬಳಿಕ ಜೋ ಕಡೆಯಿಂದ ಒನ್ಡೇ ಕ್ರಿಕೆಟ್ನಲ್ಲಿ ಮೂರಂಕಿ ಮೊತ್ತ ಬಂದಿರಲಿಲ್ಲ.
ಇದೀಗ ಚಾಂಪಿಯನ್ಸ್ ಟ್ರೋಫಿಯ 8ನೇ ಪಂದ್ಯದಲ್ಲಿ ಜೋ ರೂಟ್ 120 ರನ್ ಬಾರಿಸಿ ಮಿಂಚಿದ್ದಾರೆ. ಈ 120 ರನ್ಗಳ ಶತಕದ ಹೊರತಾಗಿಯೂ ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಸೋಲನುಭವಿಸಿದೆ. ಅಫ್ಘಾನಿಸ್ತಾನ್ ನೀಡಿದ 325 ರನ್ಗಳನ್ನು ಬೆನ್ನತ್ತಿದ ಇಂಗ್ಲೆಂಡ್ 317 ರನ್ಗಳಿಗೆ ಆಲೌಟ್ ಆಗಿ 8 ರನ್ಗಳಿಂದ ಸೋಲೊಪ್ಪಿಕೊಂಡಿದೆ.
ಇದರೊಂದಿಗೆ 6 ವರ್ಷಗಳ ಬಳಿಕ, ಅಂದರೆ ಬರೋಬ್ಬರಿ 2083 ದಿನಗಳ ನಂತರ ಜೋ ರೂಟ್ ಬ್ಯಾಟ್ನಿಂದ ಮೂಡಿಬಂದ ಶತಕವು ವ್ಯರ್ಥವಾದಂತಾಗಿದೆ. ಅಷ್ಟೇ ಅಲ್ಲದೆ ಈ ಸೋಲಿನೊಂದಿಗೆ ಇಂಗ್ಲೆಂಡ್ ತಂಡವು ಚಾಂಪಿಯನ್ಸ್ ಟ್ರೋಫಿ 2025 ರಿಂದ ಹೊರಬಿದ್ದಿದೆ.