
ರಾಷ್ಟ್ರೀಯ ತಂಡದ ವಿರುದ್ಧ ಏಕದಿನ ಸರಣಿ ಆಡಲು ಕರ್ನಾಟಕ ತಂಡ ನಮೀಬಿಯಾಗೆ ತೆರಳಿದೆ. ಇಲ್ಲಿ ನಮೀಬಿಯಾ ಅಂತಾರಾಷ್ಟ್ರೀಯ ತಂಡವಾದರೆ, ಕರ್ನಾಟಕ ಭಾರತದ ದೇಶೀಯ ತಂಡ ಎಂಬುದು ವಿಶೇಷ.

ಜೂನ್ 2 ರಿಂದ ಶುರುವಾಗಲಿರುವ ಈ ಏಕದಿನ ಸರಣಿಯಲ್ಲಿ ಒಟ್ಟು 5 ಪಂದ್ಯಗಳನ್ನಾಡಲಿದೆ. ನಮೀಬಿಯಾ ರಾಷ್ಟ್ರ ರಾಜಧಾನಿ ವಿಂಡ್‌ಹೋಕ್‌ನಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಕರ್ನಾಟಕ ತಂಡವನ್ನು ರವಿಕುಮಾರ್ ಸಮರ್ಥ್ ಮುನ್ನಡೆಸುವ ಸಾಧ್ಯತೆಯಿದೆ.

ಇನ್ನು ಕರ್ನಾಟಕ ತಂಡದಲ್ಲಿ ಕಿರಿಯ ಆಟಗಾರರಿಗೆ ಹೆಚ್ಚಿನ ಮಣೆ ಹಾಕಲಾಗಿದೆ. ಅದರಂತೆ ತಂಡದಲ್ಲಿ ಅನೀಶ್ವರ್ ಗೌತಮ್, ವೈಶಾಕ್ ವಿಜಯಕುಮಾರ್, ವಿದ್ವತ್ ಕಾವೇರಪ್ಪ, ಎಲ್ಆರ್ ಚೇತನ್, ನಿಕಿನ್ ಜೋಸ್ ಸೇರಿದಂತೆ ಯುವ ಆಟಗಾರರ ದಂಡೇ ಕಾಣಿಸಿಕೊಂಡಿದೆ. ಹೀಗಾಗಿ ನಮೀಬಿಯಾ ವಿರುದ್ಧದ ಸರಣಿಯಲ್ಲಿ ಕನ್ನಡಿಗರ ಪ್ರದರ್ಶನ ಹೇಗಿರಲಿದೆ ಎಂಬ ಕುತೂಹಲ ಏರ್ಪಟ್ಟಿದೆ.

ಮತ್ತೊಂದೆಡೆ ಕಳೆದ ವರ್ಷ ಟಿ20 ವಿಶ್ವಕಪ್ ಆಡಿದ್ದ ನಮೀಬಿಯಾ ತಂಡವು ಈ ಬಾರಿಯ ಏಕದಿನ ವಿಶ್ವಕಪ್ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ಮಾರ್ಚ್‌ನಲ್ಲಿ ನಡೆದ ಏಕದಿನ ವಿಶ್ವಕಪ್ ಕ್ವಾಲಿಫೈಯರ್ ಟೂರ್ನಿಯಲ್ಲಿ ಮೂರನೇ ಸ್ಥಾನ ಗಳಿಸಲಷ್ಟೇ ಶಕ್ತರಾದರು. ಹೀಗಾಗಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನಲ್ಲಿ ನಮೀಬಿಯಾ ತಂಡ ಕಾಣಿಸಿಕೊಳ್ಳುವುದಿಲ್ಲ.

ಅಂದಹಾಗೆ ಕರ್ನಾಟಕ ತಂಡ ವಿದೇಶಿ ಟೀಮ್ ಜೊತೆ ಆಡುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಯುಎಸ್ಎ ವಿರುದ್ಧ ಸೀಮಿತ ಓವರ್‌ಗಳ ಸರಣಿ ಆಡಿ ಜಯ ಸಾಧಿಸಿತ್ತು. ಇದೀಗ ಐಸಿಸಿ ಸಹಾಯಕ ಸದಸ್ಯ ರಾಷ್ಟ್ರವಾಗಿರುವ ನಮೀಬಿಯಾ ವಿರುದ್ಧ ಆಡುತ್ತಿರುವುದು ವಿಶೇಷ.

ನಮೀಬಿಯಾ ವಿರುದ್ಧದ ಸರಣಿಗೆ ಕರ್ನಾಟಕ ಏಕದಿನ ತಂಡ ಹೀಗಿದೆ: ಸಮರ್ಥ್ ಆರ್, ವಿಶಾಲ್ ಓನಾಟ್, ನಿಕಿನ್ ಜೋಸ್, ಕೆವಿ ಸಿದ್ಧಾರ್ಥ್, ಕಿಶನ್ ಬಿದರೆ, ಕೃತಿಕ್ ಕೃಷ್ಣ, ಶುಭಾಂಗ್ ಹೆಗ್ಡೆ, ವೈಶಾಖ್ ವಿಜಯಕುಮಾರ್, ವಿದ್ವತ್ ಕಾವೇರಪ್ಪ, ಅನೀಶ್ವರ್ ಗೌತಮ್, ಲೋಚನ್ ಅಪ್ಪಣ್ಣ, ಚೇತನ್ ಎಲ್ಆರ್, ಆದಿತ್ಯ ಗೋಯಲ್, ರಿಷಿ ಬೊಪ್ಪಣ್ಣ.