
ಟೀಮ್ ಇಂಡಿಯಾ ಆಟಗಾರ ಕರುಣ್ ನಾಯರ್ (Karun Nair) ಮತ್ತೆ ಫಾರ್ಮ್ಗೆ ಮರಳಿದ್ದಾರೆ. ಅದು ಸಹ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ. ಬೆಂಗಳೂರಿನ ಆಲೂರಿನಲ್ಲಿ ನಡೆದ ಕೆ. ತಿಮ್ಮಪ್ಪ ಸ್ಮಾರಕ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರುಣ್ ಆಜೇಯ ಶತಕ ಬಾರಿಸಿ ಮಿಂಚಿದ್ದಾರೆ.

ಗೋವಾ ತಂಡದ ವಿರುದ್ಧದ ಈ ಪಂದ್ಯದಲ್ಲಿ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಸೆಕ್ರೆಟರಿ ಇಲೆವೆನ್ ಪರ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕರುಣ್ ನಾಯರ್ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಭರ್ಜರಿ ಬ್ಯಾಟಿಂಗ್ನೊಂದಿಗೆ ಶತಕವನ್ನು ಸಹ ಪೂರೈಸಿದರು.

ಅಲ್ಲದೆ ಈ ಪಂದ್ಯದಲ್ಲಿ 169 ಎಸೆತಗಳನ್ನು ಎದುರಿಸಿದ ಕರುಣ್ 12 ಫೋರ್ ಹಾಗೂ 2 ಸಿಕ್ಸ್ಗಳೊಂದಿಗೆ ಅಜೇಯ 151 ರನ್ ಬಾರಿಸಿದ್ದಾರೆ. ಈ ಮೂಲಕ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೂ ಮುನ್ನ ತಮ್ಮ ಫಾರ್ಮ್ ಅನ್ನು ತೆರೆದಿಟ್ಟಿದ್ದಾರೆ. ಅಂದರೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಇದೇ ವಾರ ಟೀಮ್ ಇಂಡಿಯಾವನ್ನು ಘೋಷಿಸಲಾಗುತ್ತದೆ.

ಭಾರತ ಟೆಸ್ಟ್ ತಂಡದ ಘೋಷಣೆಗೂ ಮುನ್ನ 151 ರನ್ಗಳ ಭರ್ಜರಿ ಇನಿಂಗ್ಸ್ ಆಡುವ ಮೂಲಕ ಕರುಣ್ ನಾಯರ್ ಆಯ್ಕೆಗಾರರ ಗಮನ ಸೆಳೆದಿದ್ದಾರೆ. ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧದ ನಡೆದ ಸರಣಿಯಲ್ಲಿ 8 ಇನಿಂಗ್ಸ್ ಆಡಿದ್ದ ಕರುಣ್ ಕಲೆಹಾಕಿದ್ದು ಕೇವಲ 205 ರನ್ಗಳು ಮಾತ್ರ. ಹೀಗಾಗಿಯೇ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ಕನ್ನಡಿಗನನ್ನು ಕೈ ಬಿಡಲು ಬಿಸಿಸಿಐ ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ವರದಿಯಾಗಿತ್ತು.

ಇದೀಗ ಭರ್ಜರಿ ಶತಕದೊಂದಿಗೆ ಕರುಣ್ ನಾಯರ್ ಮತ್ತೆ ಮಿಂಚಿದ್ದಾರೆ. ಅದು ಸಹ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಭಾರತ ತಂಡದ ಆಯ್ಕೆಗೂ ಮುನ್ನ. ಈ ಭರ್ಜರಿ ಪ್ರದರ್ಶನದ ಫಲವಾಗಿ ವಿಂಡೀಸ್ ವಿರುದ್ಧದ ಸರಣಿಯಲ್ಲಿ 33 ವರ್ಷದ ಕರುಣ್ ನಾಯರ್ಗೆ ಚಾನ್ಸ್ ಸಿಗಲಿದೆಯಾ ಕಾದು ನೋಡಬೇಕಿದೆ.