ಕರುಣ್ ನಾಯರ್ ಔಟ್: ಭಾರತ ತಂಡದಲ್ಲಿ ಮೂವರು ಕನ್ನಡಿಗರು
India Test Squad: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಟೆಸ್ಟ್ ಸರಣಿಯು ಅಕ್ಟೋಬರ್ 2 ರಿಂದ ಶುರುವಾಗಲಿದೆ. ಅಹಮದಾಬಾದ್ ಹಾಗೂ ದೆಹಲಿಯಲ್ಲಿ ನಡೆಯಲಿರುವ ಈ ಸರಣಿಗಾಗಿ 15 ಸದಸ್ಯರುಗಳ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಕರುಣ್ ನಾಯರ್ ಹಾಗೂ ರಿಷಭ್ ಪಂತ್ ಕಾಣಿಸಿಕೊಂಡಿಲ್ಲ.
Updated on: Sep 25, 2025 | 1:17 PM

ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಟೀಮ್ ಇಂಡಿಯಾವನ್ನು (India Test Squad) ಘೋಷಿಸಲಾಗಿದೆ. 15 ಸದಸ್ಯರುಗಳ ಈ ತಂಡವನ್ನು ಶುಭ್ಮನ್ ಗಿಲ್ ಮುನ್ನಡೆಸಲಿದ್ದಾರೆ. ಇನ್ನು ಉಪನಾಯಕನಾಗಿ ರವೀಂದ್ರ ಜಡೇಜಾ ಕಾಣಿಸಿಕೊಳ್ಳಲಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ವೇಳೆ ಟೀಮ್ ಇಂಡಿಯಾದ ಉಪನಾಯಕ ರಿಷಭ್ ಪಂತ್ ಗಾಯಗೊಂಡಿದ್ದರು. ಈ ಗಾಯದ ಕಾರಣ ಪಂತ್ ವಿಂಡೀಸ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ರವೀಂದ್ರ ಜಡೇಜಾಗೆ ಉಪನಾಯಕತ್ವ ನೀಡಲಾಗಿದೆ.

ಇನ್ನು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 4 ಪಂದ್ಯಗಳನ್ನಾಡಿದ್ದ ಕರ್ನಾಟಕದ ಹಿರಿಯ ಬ್ಯಾಟರ್ ಕರುಣ್ ನಾಯರ್ಗೆ ಈ ಬಾರಿ ಸ್ಥಾನ ಲಭಿಸಿಲ್ಲ. ಆಂಗ್ಲರ ವಿರುದ್ಧದ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಕಾರಣ ಕರುಣ್ ಅವರನ್ನು ಕೈ ಬಿಡಲಾಗಿದೆ. ಇದಾಗ್ಯೂ ಭಾರತ ತಂಡದಲ್ಲಿ ಮೂವರು ಕನ್ನಡಿಗರು ಕಾಣಿಸಿಕೊಂಡಿದ್ದಾರೆ. ಅವರೆಂದರೆ....

ಕೆಎಲ್ ರಾಹುಲ್: ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲೂ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ರಾಹುಲ್ ತವರಿನಲ್ಲೂ ಭಾರತ ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿ ಕಾಣಿಸಿಕೊಳ್ಳಲಿದ್ದಾರೆ.

ದೇವದತ್ ಪಡಿಕ್ಕಲ್: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿದಿದ್ದ ಕರ್ನಾಟಕದ ಎಡಗೈ ದಾಂಡಿಗ ದೇವದತ್ ಪಡಿಕ್ಕಲ್ ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಅತ್ತ ಕರುಣ್ ನಾಯರ್ ತಂಡದಿಂದ ಹೊರಬಿದ್ದಿರುವ ಕಾರಣ ಪಡಿಕ್ಕಲ್ಗೆ ಮಧ್ಯಮ ಕ್ರಮಾಂಕದಲ್ಲಿ ಚಾನ್ಸ್ ಸಿಗುವ ಸಾಧ್ಯತೆಯಿದೆ.

ಪ್ರಸಿದ್ಧ್ ಕೃಷ್ಣ; ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ಬೌಲಿಂಗ್ ಸಂಘಟಿಸಿದ್ದ ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ಈ ಬಾರಿ ಕೂಡ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಜತೆ ಮೂರನೇ ವೇಗಿಯಾಗಿ ಪ್ರಸಿದ್ಧ್ ಕಾಣಿಸಿಕೊಳ್ಳಲಿದ್ದಾರೆ.

ಭಾರತ ಟೆಸ್ಟ್ ತಂಡ: ಶುಭ್ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ನಿತೀಶ್ ಕುಮಾರ್ ರೆಡ್ಡಿ, ಎನ್ ಜಗದೀಸನ್ (ವಿಕೆಟ್ ಕೀಪರ್).
