ಅಭಿಷೇಕ್ ಆರ್ಭಟಕ್ಕೆ ಜಯಸೂರ್ಯ ದಾಖಲೆ ಧೂಳೀಪಟ
Abhishek Sharma Record: ಏಷ್ಯಾಕಪ್ ಟೂರ್ನಿಯ 16ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಅಭಿಷೇಕ್ ಶರ್ಮಾ ಸ್ಫೋಟಕ ಅರ್ಧಶತಕ ಬಾರಿಸಿದ್ದರು. ಈ ಅರ್ಧಶತಕದ ನೆರವಿನೊಂದಿಗೆ ಭಾರತ ತಂಡ 20 ಓವರ್‌ಗಳಲ್ಲಿ 168 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ತಂಡ ಕೇವಲ 127 ರನ್ ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 41 ರನ್ ಗಳ ಜಯ ಸಾಧಿಸಿದೆ.
Updated on: Sep 25, 2025 | 7:17 AM

Asia Cup 2025: ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಯಂಗ್ ಗನ್ ಅಭಿಷೇಕ್ ಶರ್ಮಾ (Abhishek Sharma) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ಲೆಜೆಂಡ್ ಸನತ್ ಜಯಸೂರ್ಯ ಅವರ ಭರ್ಜರಿ ದಾಖಲೆಯನ್ನು ಧೂಳೀಪಟ ಮಾಡುವ ಮೂಲಕ ಎಂಬುದು ವಿಶೇಷ.

ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಬುಧವಾರ (ಸೆ.24) ನಡೆದ ಏಷ್ಯಾಕಪ್ ನ 16ನೇ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ಮೊದಲ ಮೂರು ಓವರ್‌ಗಳಲ್ಲಿ ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ಅಭಿ, ಆ ಬಳಿಕ ಬಾಂಗ್ಲಾದೇಶ್ ಬೌಲರ್‌ಗಳ ಬೆಂಡೆತ್ತಿದರು. ಪರಿಣಾಮ ಅಭಿಷೇಕ್ ಶರ್ಮಾ ಬ್ಯಾಟ್ನಿಂದ ಕೇವಲ 37 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 6 ಫೋರ್ ಗಳೊಂದಿಗೆ 75 ರನ್ಗಳು ಮೂಡಿಬಂತು. ಈ 5 ಭರ್ಜರಿ ಸಿಕ್ಸ್ ಗಳೊಂದಿಗೆ ಅಭಿಷೇಕ್ ಏಷ್ಯಾಕಪ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಅಂದರೆ ಏಷ್ಯಾಕಪ್ ಟೂರ್ನಿ ಇತಿಹಾಸದಲ್ಲೇ ಆವೃತ್ತಿಯೊಂದರಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ದಾಖಲೆ ಅಭಿಷೇಕ್ ಶರ್ಮಾ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾದ ಮಾಜಿ ಆರಂಭಿಕ ದಾಂಡಿಗ ಸನತ್ ಜಯಸೂರ್ಯ ಅವರ ಹೆಸರಿನಲ್ಲಿತ್ತು.

2008 ರ ಏಷ್ಯಾಕಪ್ ಟೂರ್ನಿಯಲ್ಲಿ ಲಂಕಾ ಲೆಜೆಂಡ್ ಸನತ್ ಜಯಸೂರ್ಯ ಬರೋಬ್ಬರಿ 14 ಸಿಕ್ಸ್ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಇದೀಗ 17 ವರ್ಷಗಳ ಬಳಿಕ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಅಭಿಷೇಕ್ ಶರ್ಮಾ ಯಶಸ್ವಿಯಾಗಿದ್ದಾರೆ.

ಈ ಬಾರಿಯ ಟೂರ್ನಿಯಲ್ಲಿ ಈವರೆಗೆ 5 ಇನಿಂಗ್ಸ್ ಆಡಿರುವ ಅಭಿಷೇಕ್ ಶರ್ಮಾ ಒಟ್ಟು 17 ಸಿಕ್ಸರ್ ಗಳನ್ನು ಬಾರಿಸಿದ್ದಾರೆ. ಈ ಮೂಲಕ ಏಷ್ಯಾಕಪ್ ಟೂರ್ನಿಯ ಆವೃತ್ತಿಯೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ದಾಖಲೆ ನಿರ್ಮಿಸಿದ್ದಾರೆ.
