
ಟಿ20 ಕ್ರಿಕೆಟ್‌ನಲ್ಲಿ ಕೀರನ್ ಪೊಲಾರ್ಡ್ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಡಲ್ಲಾಸ್ನಲ್ಲಿ ನಡೆದ ಮೇಜರ್ ಲೀಗ್ ಕ್ರಿಕೆಟ್ (MLC 2025) ಟೂರ್ನಿಯ 14ನೇ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಪೊಲಾರ್ಡ್ ವಿಶೇಷ ಸಾಧನೆ ಮಾಡಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ವಿರುದ್ಧದ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಕೀರನ್ ಪೊಲಾರ್ಡ್ ಟಿ20 ಕ್ರಿಕೆಟ್‌ನಲ್ಲಿ 700 ಪಂದ್ಯಗಳನ್ನಾಡಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ವಿಶೇಷ ಎಂದರೆ ಪೊಲಾರ್ಡ್ ಅವರನ್ನು ಹೊರತುಪಡಿಸಿ ಯಾವುದೇ ಆಟಗಾರ ಟಿ20 ಕ್ರಿಕೆಟ್‌ನಲ್ಲಿ 600 ಪಂದ್ಯಗಳನ್ನು ಕೂಡ ಆಡಿಲ್ಲ.

ಇತ್ತ ವೆಸ್ಟ್ ಇಂಡೀಸ್, ಮುಂಬೈ ಇಂಡಿಯನ್ಸ್, ಎಂಐ ನ್ಯೂಯಾರ್ಕ್, ಟ್ರಿನ್ಬಾಗೊ ನೈಟ್ ರೈಡರ್ಸ್ ಸೇರಿದಂತೆ ಹಲವು ತಂಡಗಳ ಪರ ಕಣಕ್ಕಿಳಿದಿರುವ ಪೊಲಾರ್ಡ್ ಇದೀಗ 700 ಪಂದ್ಯಗಳ ಮೈಲುಗಲ್ಲು ಮುಟ್ಟಿದ್ದಾರೆ. ಈ ಏಳು ನೂರು ಮ್ಯಾಚ್ ಗಳಲ್ಲಿ ವಿಂಡೀಸ್ ದಾಂಡಿಗ 622 ಇನಿಂಗ್ಸ್ ಗಳಲ್ಲಿ ಬ್ಯಾಟ್ ಬೀಸಿದ್ದಾರೆ.

ಈ 622 ಇನಿಂಗ್ಸ್ ಗಳಲ್ಲಿ ಒಟ್ಟು 9080 ಎಸೆತಗಳನ್ನು ಎದುರಿಸಿರುವ ಕೀರನ್ ಪೊಲಾರ್ಡ್ 13668 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ ಗಳಿಸಿದ ವಿಶ್ವದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಕ್ರಿಸ್ ಗೇಲ್ (14562) ಅಗ್ರಸ್ಥಾನದಲ್ಲಿದ್ದರೆ, ಅಲೆಕ್ಸ್ ಹೇಲ್ಸ್ (13730) ದ್ವಿತೀಯ ಸ್ಥಾನದಲ್ಲಿದ್ದಾರೆ.

ಇನ್ನು ಕೀರನ್ ಪೊಲಾರ್ಡ್ ಬಳಿಕ ಟಿ20 ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರರೆಂದರೆ ಡ್ವೇನ್ ಬ್ರಾವೊ (582), ಶೊಯೆಬ್ (557), ಆ್ಯಂಡ್ರೆ ರಸೆಲ್ (556), ಸುನಿಲ್ ನರೈನ್ (551), ಡೇವಿಡ್ ಮಿಲ್ಲರ್ (530), ಅಲೆಕ್ಸ್ ಹೇಲ್ಸ್ (500). ಈ ಏಳು ಆಟಗಾರರು ಮಾತ್ರ ಟಿ20 ಕ್ರಿಕೆಟ್ ನಲ್ಲಿ ಐನೂರು ಪಂದ್ಯಗಳ ಮೈಲಿಗಲ್ಲು ಮುಟ್ಟಿದ್ದಾರೆ.