- Kannada News Photo gallery Cricket photos India becomes the first team to lose a match after having 5 individual centuries.
೧೪೮ ವರ್ಷಗಳ ಇತಿಹಾಸದಲ್ಲೇ ಟೀಮ್ ಇಂಡಿಯಾಗೆ ಹೀಗೊಂದು ಹೀನಾಯ ಸೋಲು
India vs England 1st Test: ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಸೋಲನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ 471 ರನ್ ಕಲೆಹಾಕಿದರೆ, ಇಂಗ್ಲೆಂಡ್ 465 ರನ್ಗಳಿಸಿತು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ 364 ರನ್ಗಳಿಗೆ ಆಲೌಟ್ ಆದರು. ಅತ್ತ 371 ರನ್ಗಳ ಗುರಿಯನ್ನು ಇಂಗ್ಲೆಂಡ್ 82 ಓವರ್‌ಗಳಲ್ಲಿ ಚೇಸ್ ಮಾಡಿ ಭರ್ಜರಿ ಜಯ ಸಾಧಿಸಿದೆ.
Updated on: Jun 25, 2025 | 7:24 AM

148 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಂಡವೊಂದು ಪಂದ್ಯವೊಂದರಲ್ಲಿ 5 ಶತಕ ಸಿಡಿಸಿರುವುದು ಕೇವಲ ಮೂರು ಬಾರಿ. ಹೀಗೆ 5 ಶತಕ ಸಿಡಿಸಿ ಅಬ್ಬರಿಸಿದ ತಂಡಗಳೆಲ್ಲವೂ ಭರ್ಜರಿ ಜಯ ಸಾಧಿಸಿದೆ. ಆದರೆ ಟೀಮ್ ಇಂಡಿಯಾ ಪಾಲಿಗೆ ಆ ಅದೃಷ್ಟವಿಲ್ಲ.

ಲೀಡ್ಸ್ನ ಹೆಡಿಂಗ್ಲೆ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಯಶಸ್ವಿ ಜೈಸ್ವಾಲ್ (101), ಶುಭ್ಮನ್ (147) ಹಾಗೂ ರಿಷಭ್ ಪಂತ್ (134) ಶತಕ ಸಿಡಿಸಿದ್ದರು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಕೆಎಲ್ ರಾಹುಲ್ (137) ಹಾಗೂ ರಿಷಭ್ ಪಂತ್ (118) ಶತಕ ಬಾರಿಸಿದ್ದರು.

ಈ ಶತಕಗಳ ಹೊರತಾಗಿಯೂ ಈ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು ಸಾಧ್ಯವಾಗಿಲ್ಲ. ಭಾರತ ತಂಡವು ಕೊನೆಯ ಇನಿಂಗ್ಸ್ ನಲ್ಲಿ ನೀಡಿದ 371 ರನ್ ಗಳ ಗುರಿಯನ್ನು ಇಂಗ್ಲೆಂಡ್ ತಂಡವು 82 ಓವರ್‌ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಇದಕ್ಕೂ ಮುನ್ನ ಒಂದೇ ಪಂದ್ಯದಲ್ಲಿ 5 ಶತಕಗಳನ್ನು ಸಿಡಿಸಿದ್ದ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ್ ತಂಡಗಳು ಭರ್ಜರಿ ಗೆಲುವು ದಾಖಲಿಸಿದ್ದವು. 1955 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 5 ಶತಕ ಬಾರಿಸಿದ ಆಸೀಸ್ ಪಡೆ ಇನಿಂಗ್ಸ್ ಹಾಗೂ 82 ರನ್ ಗಳ ಅಮೋಘ ಗೆಲುವು ದಾಖಲಿಸಿತ್ತು.

ಇನ್ನು 2001 ರಲ್ಲಿ ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 5 ಶತಕ ಬಾರಿಸಿದ್ದ ಪಾಕಿಸ್ತಾನ್ ಇನಿಂಗ್ಸ್ ಹಾಗೂ 264 ರನ್ಗಳ ಅಭೂತಪೂರ್ವ ಗೆಲುವು ದಾಖಲಿಸಿತ್ತು. ಆದರೆ ಟೀಮ್ ಇಂಡಿಯಾ ದಾಂಡಿಗರು ಬಾರಿಸಿದ 5 ಶತಕಗಳು ಸೋಲಿನೊಂದಿಗೆ ವ್ಯರ್ಥವಾಗಿದೆ.

ಈ ಮೂಲಕ 148 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ 5 ಸೆಂಚುರಿ ಸಿಡಿಸಿದರೂ ಸೋತ ತಂಡವೆಂಬ ಹಣೆಪಟ್ಟಿ ಟೀಮ್ ಇಂಡಿಯಾ ಪಾಲಾಗಿದೆ. ಇದಾಗ್ಯೂ ಇಂಗ್ಲೆಂಡ್ ವಿರುದ್ಧ ಇನ್ನೂ ನಾಲ್ಕು ಪಂದ್ಯಗಳು ಉಳಿದಿದ್ದು, ಈ ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿ ಯಂಗ್ ಇಂಡಿಯಾ ಇತಿಹಾಸ ಬರೆಯಲಿದೆಯಾ ಕಾದು ನೋಡಬೇಕಿದೆ.
