
ಡಿಸೆಂಬರ್ 2 ರಿಂದ ಶುರುವಾಗಲಿರುವ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ಎಂಐ ಎಮಿರೇಟ್ಸ್ ತಂಡವನ್ನು ಕೀರನ್ ಪೊಲಾರ್ಡ್ (Kieron Pollard) ಮುನ್ನಡೆಸಲಿದ್ದಾರೆ. ಕಳೆದ ಸೀಸನ್ನಲ್ಲಿ ಈ ತಂಡವನ್ನು ನಿಕೋಲಸ್ ಪೂರನ್ ಮುನ್ನಡೆಸಿದ್ದರು. ಆದರೆ ಈ ಬಾರಿ ಹಿರಿಯ ಆಟಗಾರನಿಗೆ ನಾಯಕತ್ವ ವಹಿಸಲಾಗಿದೆ.

ನಿಕೋಲಸ್ ಪೂರನ್ ಈ ಟೂರ್ನಿಯ ಕೊನೆಯ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಏಕೆಂದರೆ ಈ ಟೂರ್ನಿಯ ನಡುವೆಯೇ ಸೌತ್ ಆಫ್ರಿಕಾ ಟಿ20 ಲೀಗ್ ಕೂಡ ಶುರುವಾಗಲಿದೆ. ಅತ್ತ ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಎಂಐ ಕೇಪ್ ಟೌನ್ ತಂಡದ ನಾಯಕನಾಗಿ ಪೂರನ್ ಕಣಕ್ಕಿಳಿಯಬೇಕಿದೆ.

ಹೀಗಾಗಿ ಎಂಐ ಎಮಿರೇಟ್ಸ್ ತಂಡವು ಕೀರನ್ ಪೊಲಾರ್ಡ್ ಅವರನ್ನು ವೈಲ್ಡ್ ಕಾರ್ಡ್ ಆಯ್ಕೆಯ ಮೂಲಕ ತಂಡಕ್ಕೆ ಸೇರ್ಪಡೆಗೊಳಿಸಿದ್ದಾರೆ. ಅಲ್ಲದೆ ಅನುಭವಿ ಆಟಗಾರನಿಗೆ ತಂಡದ ನಾಯಕತ್ವ ಜವಾಬ್ದಾರಿ ವಹಿಸಲಾಗಿದೆ. ಅದರಂತೆ ಈ ಬಾರಿ ಎಂಐ ಎಮಿರೇಟ್ಸ್ ಪಡೆಯುವ ಪೊಲಾರ್ಡ್ ಮುಂದಾಳತ್ವದಲ್ಲಿ ಕಣಕ್ಕಿಳಿಯಲಿದೆ.

ಕಳೆದ ನಾಲ್ಕು ಸೀಸನ್ಗಳಲ್ಲಿ ಎಂಐ ಎಮಿರೇಟ್ಸ್ ತಂಡವು ಒಂದು ಬಾರಿ ಮಾತ್ರ ಚಾಂಪಿಯನ್ ಪಟ್ಟ ಅಲಂಕರಿಸಿದೆ. 2024 ರಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದುಬೈ ಕ್ಯಾಪಿಟಲ್ಸ್ ತಂಡಕ್ಕೆ ಸೋಲುಣಿಸಿ ಎಂಐ ಎಮಿರೇಟ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ ಪೊಲಾರ್ಡ್ ಸಾರಥ್ಯದಲ್ಲಿ ಕಣಕ್ಕಿಳಿಯುಲಿರುವ ಎಮಿರೇಟ್ಸ್ ಪಡೆಯಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು.

ಎಂಐ ಎಮಿರೇಟ್ಸ್ ತಂಡ: ಕೀರನ್ ಪೊಲಾರ್ಡ್ (ನಾಯಕ), ನಿಕೋಲಸ್ ಪೂರನ್, ಕ್ರಿಸ್ ವೋಕ್ಸ್, ಫಝಲ್ಹಕ್ ಫಾರೂಕಿ, ಜಾನಿ ಬೈರ್‌ಸ್ಟೋವ್, ಜೋರ್ಡಾನ್ ಥಾಂಪ್ಸನ್, ಕಮಿಂದು ಮೆಂಡಿಸ್, ಅಕೀಮ್ ಆಗಸ್ಟೆ, ಎಎಮ್ ಗಝನ್‌ಫರ್, ಆಂಡ್ರೆ ಫ್ಲೆಚರ್, ಅರಬ್ ಗುಲ್, ಮೊಹಮ್ಮದ್ ಶಫೀಕ್, ಮುಹಮ್ಮದ್ ರೋಹಿದ್, ಮುಹಮ್ಮದ್ ವಸೀಮ್, ನವೀನ್-ಉಲ್-ಹಕ್, ರೊಮಾರಿಯೊ ಶೆಫರ್ಡ್, ನೊಸ್ತುಶ್ ಕೆಂಜಿಗೆ, ಶಾಕಿಬ್ ಅಲ್ ಹಸನ್, ತಾಜಿಂದರ್ ಧಿಲ್ಲೋನ್, ಟಾಮ್ ಬ್ಯಾಂಟನ್, ಉಸ್ಮಾನ್ ಖಾನ್, ಝಹೂರ್ ಖಾನ್, ಜೈನ್ ಉಲ್ ಅಬಿದಿನ್.