ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 2025 ರ ಐಪಿಎಲ್ ಆರಂಭಕ್ಕೂ ಮೊದಲು ತನ್ನ ತಂಡಕ್ಕೆ ನೂತನ ನಾಯಕನನ್ನು ನೇಮಿಸಿದೆ. ವಾಸ್ತವವಾಗಿ ಕಳೆದ ಬಾರಿ ತನ್ನ ನಾಯಕತ್ವದಲ್ಲಿ ತಂಡವನ್ನು ಚಾಂಪಿಯನ್ ಮಾಡಿದ್ದ ಶ್ರೇಯಸ್ ಅಯ್ಯರ್ ಹರಾಜಿಗೂ ಮುನ್ನವೇ ತಂಡದಿಂದ ಹೊರ ನಡೆದಿದ್ದರು. ಹೀಗಾಗಿ ನಾಯಕನ ಹುಡುಕಾಟದಲ್ಲಿದ್ದ ಕೆಕೆಆರ್ ಇದೀಗ ಅನುಭವಿ ಆಟಗಾರನಿಗೆ ನಾಯಕತ್ವದ ಪಟ್ಟ ಕಟ್ಟಿದೆ.
ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಒಡೆತದ ಕೆಕೆಆರ್ ಫ್ರಾಂಚೈಸಿ ತನ್ನ ತಂಡಕ್ಕೆ ಅಜಿಂಕ್ಯ ರಹಾನೆ ಅವರನ್ನು ನಾಯಕನನ್ನಾಗಿ ನೇಮಿಸಿದೆ. ಹಾಗೆಯೇ ವೆಂಕಟೇಶ್ ಅಯ್ಯರ್ ಉಪನಾಯಕನ ಜವಾಬ್ದಾರಿಯನ್ನು ಪಡೆದುಕೊಂಡಿದ್ದಾರೆ. 2025 ರ ಮೆಗಾ ಹರಾಜಿನಲ್ಲಿ ಅಜಿಂಕ್ಯ ರಹಾನೆಯನ್ನು ಖರೀದಿಸಿದ್ದ ಕೆಕೆಆರ್ ಇದೀಗ ಈ ಅನುಭವಿ ಬ್ಯಾಟರ್ಗೆ ನಾಯಕತ್ವದ ಜವಬ್ದಾರಿ ನೀಡಿದೆ.
ಅಜಿಂಕ್ಯ ರಹಾನೆ ಎರಡನೇ ಬಾರಿಗೆ ಈ ತಂಡದ ಭಾಗವಾಗಿದ್ದಾರೆ. ಇದಕ್ಕೂ ಮೊದಲು, ಅವರು 2022 ರಲ್ಲಿ ಈ ತಂಡದ ಭಾಗವಾಗಿದ್ದರು. ಈ ಬಾರಿಯ ಮೆಗಾ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 1.5 ಕೋಟಿ ರೂ. ನೀಡಿ ಅಂದರೆ ಮೂಲ ಬೆಲೆ ನೀಡಿ ಅಜಿಂಕ್ಯ ರಹಾನೆಯನ್ನು ಖರೀದಿಸಿತ್ತು. ಇಂತಹ ಪರಿಸ್ಥಿತಿಯಲ್ಲಿ, ಇದು ಅಜಿಂಕ್ಯ ರಹಾನೆಗೆ ಒಂದು ದೊಡ್ಡ ಅವಕಾಶವಾಗಲಿದೆ.
ರಹಾನೆಯನ್ನು ನಾಯಕನಾಗಿ ಆಯ್ಕೆ ಮಾಡಿದ ವಿಚಾರವನ್ನು ಹಂಚಿಕೊಂಡಿರುವ ಕೆಕೆಆರ್ ಸಿಇಒ ವೆಂಕಿ ಮೈಸೂರು, 'ಅಜಿಂಕ್ಯ ರಹಾನೆಯಂತಹ ಆಟಗಾರನನ್ನು ನಾಯಕನನ್ನಾಗಿ ಮಾಡುತ್ತಿರುವುದು ನಮಗೆ ಸಂತೋಷ ತಂದಿದೆ, ಅವರು ತಮ್ಮ ನಾಯಕತ್ವದ ಸಾಮರ್ಥ್ಯ ಮತ್ತು ಅನುಭವದಿಂದ ತಂಡವನ್ನು ಬಲಪಡಿಸುತ್ತಾರೆ.' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಾಗೆಯೇ ಉಪನಾಯಕತ್ವದ ಜವಬ್ದಾರಿ ಪಡೆದಿರುವ ವೆಂಕಟೇಶ್ ಅಯ್ಯರ್ ಬಗ್ಗೆ ಮಾತನಾಡಿರುವ ವೆಂಕಿ ಮೈಸೂರು, ವೆಂಕಟೇಶ್ ಕೆಕೆಆರ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ, ಅವರಲ್ಲಿ ನಾಯಕತ್ವದ ಗುಣಗಳಿವೆ. ಅವರು ಒಟ್ಟಾಗಿ ನಮ್ಮ ತಂಡವನ್ನು ಸರಿಯಾದ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡುತ್ತಾರೆ ಮತ್ತು ನಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸ ನಮಗಿದೆ ಎಂದಿದ್ದಾರೆ.
ಮತ್ತೊಂದೆಡೆ, ನಾಯಕತ್ವ ಪಡೆದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಅಜಿಂಕ್ಯ ರಹಾನೆ, ‘ಐಪಿಎಲ್‌ನ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಕೆಕೆಆರ್‌ನ ನಾಯಕತ್ವವನ್ನು ಪಡೆಯುವುದು ನನಗೆ ಗೌರವವಾಗಿದೆ. ನಮ್ಮಲ್ಲಿ ಅತ್ಯುತ್ತಮ ಮತ್ತು ಸಮತೋಲಿತ ತಂಡವಿದೆ. ನಾನು ಎಲ್ಲಾ ಆಟಗಾರರೊಂದಿಗೆ ಕೆಲಸ ಮಾಡಲು ಮತ್ತು ನಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಸವಾಲನ್ನು ಸ್ವೀಕರಿಸಲು ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ.
ಅಜಿಂಕ್ಯ ರಹಾನೆ ಐಪಿಎಲ್‌ನ ಅತ್ಯಂತ ಅನುಭವಿ ಆಟಗಾರರಲ್ಲಿ ಒಬ್ಬರು. ಅವರು ಈ ಲೀಗ್‌ನಲ್ಲಿ ಒಟ್ಟು 185 ಪಂದ್ಯಗಳನ್ನು ಆಡಿದ್ದು, 30.14 ಸರಾಸರಿಯಲ್ಲಿ 4642 ರನ್ ಗಳಿಸಿದ್ದಾರೆ. ಇದರಲ್ಲಿ 30 ಅರ್ಧಶತಕಗಳು ಮತ್ತು 2 ಶತಕಗಳು ಸೇರಿವೆ. ಹಾಗೆಯೇ ಕೆಕೆಆರ್ ಪರ ಈ ಹಿಂದೆ 7 ಪಂದ್ಯಗಳನ್ನು ಆಡಿರುವ ರಹಾನೆ 133 ರನ್ ಕಲೆಹಾಕಿದ್ದಾರೆ.
Published On - 4:11 pm, Mon, 3 March 25