
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್ ಮಾಡುತ್ತಿದ್ದು, ತಂಡದ ಪರ ಆರಂಭಿಕನಾಗಿ ಆಡಿದ ಕೆಎಲ್ ರಾಹುಲ್ ಇಂಗ್ಲೆಂಡ್‌ನಲ್ಲಿ 1000 ಟೆಸ್ಟ್ ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ.

ಮ್ಯಾಂಚೆಸ್ಟರ್ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ರಾಹುಲ್ 15 ರನ್ ಕಲೆಹಾಕಿದ ಕೂಡಲೇ ಇಂಗ್ಲೆಂಡ್‌ನಲ್ಲಿ 1000 ಟೆಸ್ಟ್ ರನ್‌ಗಳನ್ನು ಪೂರ್ಣಗೊಳಿಸಿದ ಐದನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವಿಷಯದಲ್ಲಿ ಅವರು ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್‌ರಂತಹ ದಂತಕಥೆಗಳನ್ನು ಸರಿಗಟ್ಟಿದ್ದಾರೆ.

ರಾಹುಲ್ಗಿಂತ ಮೊದಲು, ಸಚಿನ್ ತೆಂಡೂಲ್ಕರ್ (1575 ರನ್‌ಗಳು), ರಾಹುಲ್ ದ್ರಾವಿಡ್ (1376 ರನ್‌ಗಳು), ಸುನಿಲ್ ಗವಾಸ್ಕರ್ (1152 ರನ್‌ಗಳು) ಮತ್ತು ವಿರಾಟ್ ಕೊಹ್ಲಿ (1096 ರನ್‌ಗಳು) ಈ ಸಾಧನೆ ಮಾಡಿದ್ದಾರೆ.

ಇದಲ್ಲದೆ, ವಿದೇಶದಲ್ಲಿ 1000 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ ಭಾರತದ ನಾಲ್ಕನೇ ಆರಂಭಿಕ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಕೆಎಲ್ ರಾಹುಲ್ ಪಾತ್ರರಾಗಿದ್ದಾರೆ. ಈ ಮೂಲಕ ಅವರು ಸುನಿಲ್ ಗವಾಸ್ಕರ್ ಅವರನ್ನು ಸಹ ಸರಿಗಟ್ಟಿದ್ದಾರೆ. ಗವಾಸ್ಕರ್, ವೆಸ್ಟ್ ಇಂಡೀಸ್‌ನಲ್ಲಿ 1404 ರನ್‌ಗಳು, ಇಂಗ್ಲೆಂಡ್‌ನಲ್ಲಿ 1152 ರನ್‌ಗಳು ಮತ್ತು ಪಾಕಿಸ್ತಾನದಲ್ಲಿ 1001 ರನ್‌ಗಳನ್ನು ಗಳಿಸಿದ್ದಾರೆ.

ಇದರ ಜೊತೆಗೆ ಇಂಗ್ಲೆಂಡ್ ನೆಲದಲ್ಲಿ ಅತ್ಯಧಿಕ ರನ್ ಕಲೆಹಾಕಿದ ಏಷ್ಯಾದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ರಾಹುಲ್ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಸುನಿಲ್ ಗವಾಸ್ಕರ್ ಇಂಗ್ಲೆಂಡ್‌ನಲ್ಲಿ 1152 ರನ್ ಬಾರಿಸಿದ್ದರೆ, ಇದೀಗ ಎರಡನೇ ಸ್ಥಾನಕ್ಕೇರಿರುವ ರಾಹುಲ್ 1000 ಕ್ಕೂ ಅಧಿಕ ರನ್ ಬಾರಿಸಿದ್ದಾರೆ.