ಸೆಂಚುರಿಯನ್ ಮೈದಾನದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಕೆಎಲ್ ರಾಹುಲ್ (KL Rahul) ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ರಾಹುಲ್ 137 ಎಸೆತಗಳಲ್ಲಿ 14 ಫೋರ್ ಹಾಗೂ 4 ಸಿಕ್ಸ್ನೊಂದಿಗೆ 101 ರನ್ ಬಾರಿಸಿದರು.
ಈ ಶತಕದೊಂದಿಗೆ ಕೆಎಲ್ ರಾಹುಲ್ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ವಿಶೇಷ ದಾಖಲೆಯೊಂದನ್ನು ಸರಿಗಟ್ಟಿದರು. ಅಂದರೆ 2015 ರಿಂದ SENA ದೇಶಗಳಲ್ಲಿ ಅತೀ ಹೆಚ್ಚು ಟೆಸ್ಟ್ ಶತಕ ಬಾರಿಸಿದ ಭಾರತೀಯರಲ್ಲಿ ಕಿಂಗ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದರು.
ವಿರಾಟ್ ಕೊಹ್ಲಿ ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲೆಂಡ್, ಆಸ್ಟ್ರೇಲಿಯಾ (SENA) ದಲ್ಲಿ 2015 ರಿಂದ 5 ಟೆಸ್ಟ್ ಶತಕ ಸಿಡಿಸಿದ್ದಾರೆ. ಇದೀಗ ಸೌತ್ ಆಫ್ರಿಕಾ ವಿರುದ್ಧ ಸೆಂಚುರಿ ಸಿಡಿಸುವ ಮೂಲಕ ರಾಹುಲ್ ಈ ದಾಖಲೆಯನ್ನು ಸರಿಗಟ್ಟಿದ್ದಾರೆ.
ಕೆಎಲ್ ರಾಹುಲ್ ಕೂಡ SENA ದೇಶಗಳಲ್ಲಿ ಕಳೆದ 8 ವರ್ಷಗಳಲ್ಲಿ 5 ಟೆಸ್ಟ್ ಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಸರಿಗಟ್ಟುವಲ್ಲಿ ಕನ್ನಡಿಗ ಯಶಸ್ವಿಯಾಗಿದ್ದಾರೆ.
ಈ ಭರ್ಜರಿ ಶತಕದೊಂದಿಗೆ ಸೆಂಚುರಿಯನ್ ಮೈದಾನದಲ್ಲಿ 2 ಶತಕ ಬಾರಿಸಿದ ಮೊದಲ ವಿದೇಶಿ ಬ್ಯಾಟರ್ ಎಂಬ ದಾಖಲೆ ಕೂಡ ಕೆಎಲ್ ರಾಹುಲ್ ಪಾಲಾಗಿದೆ. ಇದಕ್ಕೂ ಮುನ್ನ 2021 ರಲ್ಲಿ ಇದೇ ಮೈದಾನದಲ್ಲಿ 123 ರನ್ಗಳ ಶತಕ ಸಿಡಿಸಿದ್ದರು. ಇದೀಗ ಮತ್ತೊಮ್ಮೆ ಮೂರಂಕಿ ರನ್ಗಳಿಸಿ ವಿಶೇಷ ದಾಖಲೆಯನ್ನು ತಮ್ಮಾಗಿಸಿಕೊಂಡಿರುವುದು ವಿಶೇಷ.
ಕೆಎಲ್ ರಾಹುಲ್ ಅವರ ಈ ಶತಕದ ನೆರವಿನಿಂದ ಟೀಮ್ ಇಂಡಿಯಾ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 245 ರನ್ ಕಲೆಹಾಕಿದೆ. ಇದರ ಬೆನ್ನಲ್ಲೇ ಮೊದಲ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ತಂಡವು 2ನೇ ದಿನದಾಟದ ಮುಕ್ತಾಯದ ವೇಳೆಗೆ 5 ವಿಕೆಟ್ ಕಳೆದುಕೊಂಡು 256 ರನ್ಗಳಿಸಿದೆ.