
ಅಫ್ಘಾನಿಸ್ತಾನ್ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾವನ್ನು ಘೋಷಿಸಲಾಗಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಸಂಜು ಸ್ಯಾಮ್ಸನ್ ಕಂಬ್ಯಾಕ್ ಮಾಡಿದರೆ, ಅತ್ತ ಅಚ್ಚರಿ ಎಂಬಂತೆ ಕೆಎಲ್ ರಾಹುಲ್ (KL Rahul) ತಂಡದಿಂದ ಹೊರಬಿದ್ದಿದ್ದಾರೆ.

ಭಾರತದ ಪರ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಕೆಎಲ್ ರಾಹುಲ್ ಅವರನ್ನು ಈ ಬಾರಿ ಆಯ್ಕೆಗೆ ಪರಿಗಣಿಸಿಲ್ಲ. ಇದಕ್ಕೆ ಮುಖ್ಯ ಕಾರಣ ತಂಡದಲ್ಲಿ ಯುವ ಆಟಗಾರರಿಗೆ ಅವಕಾಶ ಕಲ್ಪಿಸಿರುವುದು.

ಅಂದರೆ ಈ ಬಾರಿ ಟೀಮ್ ಇಂಡಿಯಾದ ಆರಂಭಿಕರಾಗಿ ಶುಭ್ಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್ ಅವರನ್ನು ಆಯ್ಕೆ ಮಾಡಲಾಗಿದೆ. ಹಾಗೆಯೇ ಮತ್ತೋರ್ವ ಆರಂಭಿಕನಾಗಿ ರೋಹಿತ್ ಶರ್ಮಾ ಇದ್ದಾರೆ. ಇತ್ತ ಕೆಎಲ್ ರಾಹುಲ್ ಟಿ20 ಕ್ರಿಕೆಟ್ನಲ್ಲಿ ಇದುವರೆಗೆ ಮಧ್ಯಮ ಕ್ರಮಾಂಕದಲ್ಲಿ ಆಡಿಲ್ಲ. ಹೀಗಾಗಿ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ.

ಮತ್ತೊಂದೆಡೆ ವಿಕೆಟ್ ಕೀಪರ್ ಬ್ಯಾಟರ್ಗಳಾಗಿ ಜಿತೇಶ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಆಯ್ಕೆಯಾಗಿದ್ದಾರೆ. ಈ ಇಬ್ಬರು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುವುದು ಖಚಿತ. ಆದರೆ ಇವರಿಬ್ಬರೂ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಹೇಳಲಾಗುವುದಿಲ್ಲ.

ಏಕೆಂದರೆ ಟಿ20 ವಿಶ್ವಕಪ್ ತಂಡದ ಆಯ್ಕೆಗೆ ಐಪಿಎಲ್ನಲ್ಲಿನ ಪ್ರದರ್ಶನವನ್ನೂ ಕೂಡ ಪರಿಗಣಿಸಲಾಗುತ್ತದೆ ಎಂದು ಈಗಾಗಲೇ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಸ್ಪಷ್ಟಪಡಿಸಿದ್ದಾರೆ. ಅದರಂತೆ ಮುಂಬರುವ ಐಪಿಎಲ್ ಮೂಲಕ ಕಂಬ್ಯಾಕ್ ಮಾಡುವ ಅವಕಾಶ ಕೆಎಲ್ ರಾಹುಲ್ಗೆ ಲಭಿಸಲಿದೆ.

ಒಂದು ವೇಳೆ ಐಪಿಎಲ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದರೆ ಕೆಎಲ್ ರಾಹುಲ್ ಅವರನ್ನು ಆಯ್ಕೆಗೆ ಪರಿಗಣಿಸಬೇಕಾಗುತ್ತದೆ. ಅದರಲ್ಲೂ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಣಕ್ಕಿಳಿಯುವ ರಾಹುಲ್ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಇತಿಹಾಸ ಹೊಂದಿದ್ದಾರೆ.

ಹೀಗಾಗಿ ಮುಂಬರುವ ಐಪಿಎಲ್ನಲ್ಲಿ ಮಿಂಚಿದರೆ ಕೆಎಲ್ ರಾಹುಲ್ಗೆ ಭಾರತ ಟಿ20 ತಂಡದ ಬಾಗಿಲು ತೆರೆದುಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ಅದರಂತೆ ಐಪಿಎಲ್ ಮೂಲಕ ಕೆಎಲ್ಆರ್ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳಲಿದ್ದಾರಾ ಕಾದು ನೋಡಬೇಕಿದೆ.