
ಟೀಮ್ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಬಾಲಿವುಡ್ ನಟಿ ಆಥಿಯಾ ಶೆಟ್ಟಿಯೊಂದಿಗೆ ಹಸೆಮಣೆ ಏರಿದ್ದಾರೆ. ಜನವರಿ 23 ರಂದು ನಡೆದ ಸರಳ ಸಮಾರಂಭದಲ್ಲಿ ಕುಟುಂಬಸ್ಥರ ಹಾಗೂ ಆಪ್ತರ ಸಮ್ಮುಖದಲ್ಲಿ ಕರ್ನಾಟಕದ ಕ್ರಿಕೆಟಿಗ ಬಹುಭಾಷಾ ನಟ ಸುನೀಲ್ ಶೆಟ್ಟಿ ಅವರ ಮಗಳನ್ನು ವರಿಸಿದರು.

ಆದರೆ ಇತ್ತ ಜನವರಿ 24 ರಂದು ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ 3ನೇ ಏಕದಿನ ಪಂದ್ಯವಾಡಬೇಕಿತ್ತು. ಹೀಗಾಗಿ ಕೆಎಲ್ ರಾಹುಲ್ ಆಪ್ತರೆನಿಸಿಕೊಂಡಿರುವ ವಿರಾಟ್ ಕೊಹ್ಲಿ ಸೇರಿದಂತೆ ಕೆಲ ಆಟಗಾರರು ಶುಭ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ.

ಇದಾಗ್ಯೂ ಕಿಂಗ್ ಕೊಹ್ಲಿ ತನ್ನ ಗೆಳೆಯನಿಗೆ ವಿಶೇಷ ಉಡುಗೊರೆಯನ್ನು ವಿವಾಹದಂದು ನೀಡಿದ್ದಾರೆ. ಅದು ಕೂಡ ಕೋಟಿ ಬೆಲೆಯ ಕಾರು ಎಂಬುದೇ ವಿಶೇಷ.

ಹೌದು, ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೆಎಲ್ ರಾಹುಲ್ ಹಾಗೂ ಆಥಿಯಾ ಶೆಟ್ಟಿಗೆ 2.17 ಬೆಲೆಯ BMW ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ.

ಸದ್ಯ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಕೆಎಲ್ ರಾಹುಲ್ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ವೇಳೆ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಇನ್ನು ನವದಂಪತಿಗಳ ಆರಕ್ಷತೆ ಕಾರ್ಯಕ್ರಮವು ಐಪಿಎಲ್ ಬಳಿಕ ಮುಂಬೈನಲ್ಲಿ ಆಯೋಜನೆಗೊಳ್ಳಲಿದೆ ಎಂದು ವರದಿಯಾಗಿದ್ದು, ಈ ಸಮಾರಂಭದಲ್ಲಿ ಬಾಲಿವುಡ್ ತಾರೆಯರು, ಕ್ರಿಕೆಟಿಗರು ಹಾಗೂ ಖ್ಯಾತ ಉದ್ಯಮಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.