- Kannada News Photo gallery Cricket photos Kumar Sangakkara opts out of applying for Team India head coach role
‘ನನಗೆ ಸಮಯವಿಲ್ಲ’; ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆ ಬೇಡವೆಂದ ಮತ್ತೊಬ್ಬ ಅನುಭವಿ
Team India Head Coach: ಕುಮಾರ್ ಸಂಗಕ್ಕಾರ ಕೂಡ ಭಾರತ ತಂಡದ ಮುಖ್ಯ ಕೋಚ್ ರೇಸ್ನಲ್ಲಿದ್ದಾರೆ ಎಂಬ ಊಹಾಪೋಹಗಳು ಇದ್ದವು. ಆದರೆ ಇದೀಗ ಸ್ವತಃ ಸಂಗಕ್ಕಾರ ಅವರೇ ಮುಂದೆ ಬಂದು ಈ ಸುದ್ದಿಯನ್ನು ನಿರಾಕರಿಸಿದ್ದಾರೆ. ಮುಖ್ಯ ಕೋಚ್ ಆಗಲು ಬಿಸಿಸಿಐ ನನ್ನನ್ನು ಸಂಪರ್ಕಿಸಿಲ್ಲ ಮತ್ತು ಅಂತಹ ದೊಡ್ಡ ಜವಾಬ್ದಾರಿಯನ್ನು ನಿಭಾಯಿಸಲು ನನಗೆ ಸಮಯವಿಲ್ಲ ಎಂದಿದ್ದಾರೆ.
Updated on: May 25, 2024 | 5:35 PM

ಭಾರತ ತಂಡಕ್ಕೆ ಹೊಸ ಮುಖ್ಯ ಕೋಚ್ ಹುಡುಕಾಟದಲ್ಲಿ ಬಿಸಿಸಿಐ ನಿರತವಾಗಿದೆ. ರಾಹುಲ್ ದ್ರಾವಿಡ್ ನಂತರ ಟೀಂ ಇಂಡಿಯಾದ ಮುಂದಿನ ಮುಖ್ಯ ಕೋಚ್ ಯಾರು ಎಂಬುದು ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಮೇ 27 ಕೊನೆಯ ದಿನವಾಗಿದೆ.

ಭಾರತ ತಂಡದ ಪ್ರಸ್ತುತ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಅವರ ಅಧಿಕಾರಾವಧಿಯು ಟಿ20 ವಿಶ್ವಕಪ್ 2024 ರ ನಂತರ ಕೊನೆಗೊಳ್ಳಲಿದೆ. ಭಾರತ ತಂಡದ ಮುಂದಿನ ಮುಖ್ಯ ಕೋಚ್ ಯಾರೇ ಆಗಿರಲಿ ಅವರ ಅಧಿಕಾರಾವಧಿ ಜುಲೈ 1 ರಿಂದ ಪ್ರಾರಂಭವಾಗಲಿದೆ ಎಂದು ಬಿಸಿಸಿಐ ಹೇಳಿದೆ.

ಈ ಸಂಚಿಕೆಯಲ್ಲಿ, ಮುಖ್ಯ ಕೋಚ್ ರೇಸ್‌ನಲ್ಲಿ ಭಾಗಿಯಾಗಿರುವ ಮತ್ತೊಬ್ಬ ಆಟಗಾರ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಈ ದಿಗ್ಗಜ ಆಟಗಾರ ಬೇರೆ ಯಾರೂ ಅಲ್ಲ, ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಹಾಗೂ ಶ್ರೀಲಂಕಾದ ಮಾಜಿ ಆಟಗಾರ ಕುಮಾರ್ ಸಂಗಕ್ಕಾರ.

ಕುಮಾರ್ ಸಂಗಕ್ಕಾರ ಕೂಡ ಭಾರತ ತಂಡದ ಮುಖ್ಯ ಕೋಚ್ ರೇಸ್ನಲ್ಲಿದ್ದಾರೆ ಎಂಬ ಊಹಾಪೋಹಗಳು ಇದ್ದವು. ಆದರೆ ಇದೀಗ ಸ್ವತಃ ಸಂಗಕ್ಕಾರ ಅವರೇ ಮುಂದೆ ಬಂದು ಈ ಸುದ್ದಿಯನ್ನು ನಿರಾಕರಿಸಿದ್ದಾರೆ. ಮುಖ್ಯ ಕೋಚ್ ಆಗಲು ಬಿಸಿಸಿಐ ನನ್ನನ್ನು ಸಂಪರ್ಕಿಸಿಲ್ಲ ಮತ್ತು ಅಂತಹ ದೊಡ್ಡ ಜವಾಬ್ದಾರಿಯನ್ನು ನಿಭಾಯಿಸಲು ನನಗೆ ಸಮಯವಿಲ್ಲ ಎಂದಿದ್ದಾರೆ.

ಪ್ರಸ್ತುತ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಲು ನನಗೆ ತುಂಬಾ ಸಂತೋಷವಾಗಿದೆ ಎಂದಿರುವ ಸಂಗಕ್ಕಾರ ನನಗೆ ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆ ಬೇಕಿಲ್ಲ ಎಂಬುದನ್ನು ಬಹಿರಂಗ ಪಡಿಸಿದ್ದಾರೆ. ಸಂಗಕ್ಕಾರಗೂ ಮೊದಲು, ಅನೇಕ ಅನುಭವಿ ಆಟಗಾರರು ಟೀಂ ಇಂಡಿಯಾದ ಮುಖ್ಯ ಕೋಚ್ ಆಗಲು ನಿರಾಕರಿಸಿದ್ದರು.

ಅವರಲ್ಲಿ ನ್ಯೂಜಿಲೆಂಡ್‌ನ ಮಾಜಿ ಅನುಭವಿ ಆಟಗಾರ ಸ್ಟೀಫನ್ ಫ್ಲೆಮಿಂಗ್, ಆಸ್ಟ್ರೇಲಿಯಾದ ಮಾಜಿ ಆಟಗಾರರಾದ ಜಸ್ಟಿನ್ ಲ್ಯಾಂಗರ್ ಮತ್ತು ರಿಕಿ ಪಾಂಟಿಂಗ್ ಕೂಡ ಮುಖ್ಯ ಕೋಚ್ ಆಗಲು ನಿರಾಸಕ್ತಿ ತೋರಿದ್ದಾರೆ. ಹೀಗಾಗಿ ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದಾದ ಟೀಂ ಇಂಡಿಯಾಗೆ ಯಾರು ಮುಖ್ಯ ಕೋಚ್ ಆಗುತ್ತಾರೆ ಎಂಬುದು ಭಾರಿ ಕುತೂಹಲ ಕೆರಳಿಸಿದೆ.
























