- Kannada News Photo gallery Cricket photos left-arm spinners took five-wicket hauls first time in Test cricket
21 ವಿಕೆಟ್ ಕಬಳಿಸಿ ಟೆಸ್ಟ್ನಲ್ಲಿ ಹೊಸ ಇತಿಹಾಸ ಬರೆದ ಎಜಾಝ್-ಜಡೇಜಾ
India vs New Zealand: ಭಾರತದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ 25 ರನ್ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ 10 ವಿಕೆಟ್ ಪಡೆದರೆ, ನ್ಯೂಝಿಲೆಂಡ್ ಸ್ಪಿನ್ನರ್ ಎಜಾಝ್ ಪಟೇಲ್ 11 ವಿಕೆಟ್ ಕಬಳಿಸಿದ್ದರು. ಈ ಮೂಲಕ 21 ವಿಕೆಟ್ ಉರುಳಿಸಿ ಎಜಾಝ್-ಜಡೇಜಾ ಜೋಡಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
Updated on: Nov 04, 2024 | 12:01 PM

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೂವರು ಬೌಲರ್ಗಳು ಒಂದೇ ಇನಿಂಗ್ಸ್ನಲ್ಲಿ 10 ವಿಕೆಟ್ ಕಬಳಿಸಿದ್ದಾರೆ. ಇನ್ನು ನೂರಕ್ಕೂ ಹೆಚ್ಚು ಬೌಲರ್ಗಳು ಐದು ವಿಕೆಟ್ ಪಡೆದಿದ್ದಾರೆ. ಆದರೆ ಟೆಸ್ಟ್ ಪಂದ್ಯವೊಂದರ ನಾಲ್ಕು ಇನಿಂಗ್ಸ್ಗಳಲ್ಲಿ ಐದೈದು ವಿಕೆಟ್ ಕಬಳಿಸಿದ ಎಡಗೈ ಸ್ಪಿನ್ನರ್ಗಳು ಕೇವಲ ಇಬ್ಬರು. ಅವರೇ ರವೀಂದ್ರ ಜಡೇಜಾ ಹಾಗೂ ಎಜಾಝ್ ಪಟೇಲ್.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ 65 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ನ್ಯೂಝಿಲೆಂಡ್ ಎಡಗೈ ಸ್ಪಿನ್ನರ್ ಎಜಾಝ್ ಪಟೇಲ್ 103 ರನ್ ನೀಡಿ 5 ವಿಕೆಟ್ ಪಡೆದಿದ್ದರು.

ಇನ್ನು ಎರಡನೇ ಇನಿಂಗ್ಸ್ನಲ್ಲಿ ರವೀಂದ್ರ ಜಡೇಜಾ 55 ರನ್ ನೀಡಿ 5 ವಿಕೆಟ್ ಪಡೆದರೆ, ಎಜಾಝ್ ಪಟೇಲ್ 57 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು. ಇದರೊಂದಿಗೆ ಟೆಸ್ಟ್ ಪಂದ್ಯವೊಂದರ 4 ಇನಿಂಗ್ಸ್ಗಳಲ್ಲಿ 5 ವಿಕೆಟ್ ಪಡೆದ ಎಡಗೈ ಸ್ಪಿನ್ನರ್ಗಳೆಂಬ ವಿಶೇಷ ದಾಖಲೆ ಎಜಾಝ್ ಪಟೇಲ್ ಹಾಗೂ ರವೀಂದ್ರ ಜಡೇಜಾ ಪಾಲಾಯಿತು.

ಇದಕ್ಕೂ ಮುನ್ನ ಯಾವುದೇ ಎಡಗೈ ಬೌಲರ್ಗಳು ಒಂದೇ ಪಂದ್ಯದಲ್ಲಿ 4 ಐದು ವಿಕೆಟ್ಗಳ ಸಾಧನೆ ಮಾಡಿರಲಿಲ್ಲ. ಇದೀಗ ಎಜಾಝ್ ಪಟೇಲ್ ಹಾಗೂ ರವೀಂದ್ರ ಜಡೇಜಾ ಜೊತೆಗೂಡಿ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಾಗೆಯೇ ಈ ಪಂದ್ಯದಲ್ಲಿ ಪಡೆದ 11 ವಿಕೆಟ್ಗಳೊಂದಿಗೆ ಎಜಾಝ್ ಪಟೇಲ್ ಭಾರತದ ಪಿಚ್ವೊಂದರಲ್ಲಿ ಅತ್ಯಧಿಕ ಟೆಸ್ಟ್ ವಿಕೆಟ್ ಪಡೆದ ವಿದೇಶಿ ಬೌಲರ್ ಎನಿಸಿಕೊಂಡಿದ್ದಾರೆ. ಎಜಾಝ್ ಪಟೇಲ್ ವಾಂಖೆಡೆ ಸ್ಟೇಡಿಯಂನಲ್ಲಿ 2 ಪಂದ್ಯಗಳನ್ನಾಡಿದ್ದು, ಈ ವೇಳೆ ಒಟ್ಟು 25 ವಿಕೆಟ್ ಕಬಳಿಸಿ ಈ ದಾಖಲೆ ಬರೆದಿದ್ದಾರೆ.
