ನೇಪಾಳಿಗರ ಅಬ್ಬರಕ್ಕೆ ಟಿ20 ಕ್ರಿಕೆಟ್ನ ದಾಖಲೆಗಳು ಧೂಳೀಪಟ
TV9 Web | Updated By: ಝಾಹಿರ್ ಯೂಸುಫ್
Updated on:
Sep 27, 2023 | 5:18 PM
Nepal vs Mongolia: ಏಷ್ಯನ್ ಗೇಮ್ಸ್‌ನಲ್ಲಿ ಮೊದಲ ಶತಕ ಸಿಡಿಸಿದ ದಾಖಲೆ ಕೂಡ ನೇಪಾಳ ತಂಡದ ಕುಶಾಲ್ ಮಲ್ಲ ಹೆಸರಿಗೆ ಸೇರ್ಪಡೆಯಾಗಿದೆ. ಈ ಪಂದ್ಯದಲ್ಲಿ ಕುಶಾಲ್ 50 ಎಸೆತಗಳಲ್ಲಿ 12 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ ಅಜೇಯ 137 ರನ್ ಬಾರಿಸಿದ್ದಾರೆ.
1 / 10
ಏಷ್ಯನ್ ಗೇಮ್ಸ್ನ ಪುರುಷರ ಮೊದಲ ಟಿ20 ಪಂದ್ಯದಲ್ಲಿ ಮಂಗೋಲಿಯಾ ವಿರುದ್ಧ ನೇಪಾಳ ತಂಡವು ಅಮೋಘ ಗೆಲುವು ದಾಖಲಿಸಿದೆ. ಈ ಭರ್ಜರಿ ಗೆಲುವಿನೊಂದಿಗೆ ನೇಪಾಳ ತಂಡದ ಆಟಗಾರರು ಹಲವು ವಿಶ್ವದಾಖಲೆಗಳನ್ನು ಕೂಡ ನಿರ್ಮಿಸಿರುವುದು ವಿಶೇಷ. ಆ ದಾಖಲೆಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...
2 / 10
1- ಅತ್ಯಧಿಕ ಸ್ಕೋರ್: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡವು 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಕಲೆಹಾಕಿದ್ದು ಬರೋಬ್ಬರಿ 314 ರನ್‌ಗಳು. ಇದರೊಂದಿಗೆ ಟಿ20 ಕ್ರಿಕೆಟ್ನಲ್ಲಿ 300+ ರನ್ ಕಲೆಹಾಕಿದ ಮೊದಲ ತಂಡ ಎಂಬ ದಾಖಲೆ ನೇಪಾಳ ಪಾಲಾಗಿದೆ. ಈ ಹಿಂದೆ ಅಫ್ಘಾನಿಸ್ತಾನ್ 278 ರನ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.
3 / 10
2- ಅತೀ ವೇಗದ ಶತಕ: ಈ ಪಂದ್ಯದಲ್ಲಿ 34 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಕುಶಾಲ್ ಮಲ್ಲ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತೀ ವೇಗದ ಶತಕ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ 35 ಎಸೆತಗಳಲ್ಲಿ ಶತಕ ಸಿಡಿಸಿದ್ದ ರೋಹಿತ್ ಶರ್ಮಾ ಹಾಗೂ ಡೇವಿಡ್ ಮಿಲ್ಲರ್ ಹೆಸರಿನಲ್ಲಿತ್ತು.
4 / 10
3- ಅತೀ ವೇಗದ ಅರ್ಧಶತಕ: ಈ ಪಂದ್ಯದಲ್ಲಿ ದೀಪೇಂದ್ರ ಸಿಂಗ್ ಕೇವಲ 9 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಇದರೊಂದಿಗೆ ಟಿ20 ಕ್ರಿಕೆಟ್ನಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ದಾಖಲೆ ನೇಪಾಳಿ ಕ್ರಿಕೆಟಿಗನ ಹೆಸರಿಗೆ ಸೇರ್ಪಡೆಯಾಯಿತು. ಇದಕ್ಕೂ ಮುನ್ನ ಈ ದಾಖಲೆ ಯುವರಾಜ್ ಸಿಂಗ್ ಹೆಸರಿನಲ್ಲಿತ್ತು. ಇಂಗ್ಲೆಂಡ್ ವಿರುದ್ಧ ಯುವಿ 12 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದರು.
5 / 10
4- ಅತ್ಯಧಿಕ ಸ್ಟ್ರೈಕ್ ರೇಟ್: ಈ ಪಂದ್ಯದಲ್ಲಿ ದೀಪೇಂದ್ರ ಸಿಂಗ್ ಕೇವಲ 10 ಎಸೆತಗಳಲ್ಲಿ 52 ರನ್ ಚಚ್ಚಿದ್ದರು. ಅಂದರೆ 520.00 ರ ಸ್ಟ್ರೈಕ್ ರೇಟ್ನಲ್ಲಿ ದೀಪೇಂದ್ರ ಬ್ಯಾಟ್ ಬೀಸಿದ್ದರು. ಇದರೊಂದಿಗೆ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಸ್ಟ್ರೈಕ್ ರೇಟ್ನಲ್ಲಿ ರನ್ ಕಲೆಹಾಕಿದ ವಿಶ್ವ ದಾಖಲೆ ನೇಪಾಳಿ ಕ್ರಿಕೆಟಿಗನ ಪಾಲಾಯಿತು.
6 / 10
5- ಬೃಹತ್ ಅಂತರದ ಗೆಲುವು: ಈ ಪಂದ್ಯದಲ್ಲಿ ನೇಪಾಳ ತಂಡ ನೀಡಿದ 314 ರನ್ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಮಂಗೋಲಿಯಾ ಕೇವಲ 41 ರನ್ಗಳಿಗೆ ಆಲೌಟ್ ಆಗಿದೆ. ಇದರೊಂದಿಗೆ ನೇಪಾಳ ತಂಡ 271 ರನ್ಗಳ ಭರ್ಜರಿ ಜಯ ಸಾಧಿಸಿದೆ. ಇದು ಟಿ20 ಕ್ರಿಕೆಟ್ನಲ್ಲಿ ಮೂಡಿಬಂದ ಬೃಹತ್ ಅಂತರದ ಗೆಲುವಾಗಿದೆ. ಟರ್ಕಿ ವಿರುದ್ಧ ಜೆಕ್ ಗಣರಾಜ್ಯದ 257 ರನ್ಗಳ ಅಂತರದಿಂದ ಜಯ ಸಾಧಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.
7 / 10
6- ಅತೀ ಹೆಚ್ಚು ಸಿಕ್ಸರ್ಗಳು: ಈ ಪಂದ್ಯದಲ್ಲಿ ನೇಪಾಳ ಬ್ಯಾಟರ್ಗಳು ಒಟ್ಟು 26 ಸಿಕ್ಸ್ಗಳನ್ನು ಸಿಡಿಸಿದ್ದರು. ಇದರೊಂದಿಗೆ ಟಿ20 ಇನಿಂಗ್ಸ್ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ತಂಡ ಹೆಗ್ಗಳಿಕೆಯು ನೇಪಾಳ ಪಾಲಾಗಿದೆ. ಈ ಮೂಲಕ 2019ರಲ್ಲಿ ಐರ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ್ ಬಾರಿಸಿದ್ದ 22 ಸಿಕ್ಸ್ಗಳ ದಾಖಲೆಯನ್ನು ನೇಪಾಳ ತಂಡ ಮುರಿದಿದೆ.
8 / 10
7- ಶತಕ ಸಿಡಿಸಿದ 2ನೇ ಕಿರಿಯ ಬ್ಯಾಟರ್: ಈ ಪಂದ್ಯದಲ್ಲಿ 34 ಎಸೆತಗಳಲ್ಲಿ ಕುಶಾಲ್ ಮಲ್ಲ ಶತಕ ಪೂರೈಸುತ್ತಿದ್ದಂತೆ ಟಿ20 ಕ್ರಿಕೆಟ್ನಲ್ಲಿ ಸೆಂಚುರಿ ಸಿಡಿಸಿದ 2ನೇ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ. 19 ವರ್ಷ ಮತ್ತು 206 ದಿನಗಳಲ್ಲಿ ಕುಶಾಲ್ ಈ ಸಾಧನೆ ಮಾಡಿದ್ದಾರೆ. ಇನ್ನು ಟಿ20 ಕ್ರಿಕೆಟ್ನಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆ ಫ್ರಾನ್ಸ್ನ ಗುಸ್ತಾವ್ ಮೆಕಿಯಾನ್ ಹೆಸರಿನಲ್ಲಿದೆ. 18 ವರ್ಷ ಮತ್ತು 282 ದಿನಗಳಲ್ಲಿ ಟಿ20 ಶತಕ ಸಿಡಿಸಿ ಗುಸ್ತಾವ್ ಈ ಸಾಧನೆ ಮಾಡಿದ್ದಾರೆ.
9 / 10
8- ಹೆಚ್ಚುವರಿ ರನ್‌ಗಳು (56%): ಈ ಪಂದ್ಯದಲ್ಲಿ ಮಂಗೋಲಿಯಾ ತಂಡ 41 ರನ್ಗಳಿಗೆ ಆಲೌಟ್ ಆಗಿತ್ತು. ಆದರೆ ಇದರಲ್ಲಿ ಮಂಗೋಲಿಯಾ ಬ್ಯಾಟರ್ಗಳು ಕಲೆಹಾಕಿರುವುದು ಕೇವಲ 18 ರನ್‌ಗಳು ಮಾತ್ರ. ಇನ್ನುಳಿದ 23 ರನ್ಗಳನ್ನು ನೇಪಾಳ ಬೌಲರ್ಗಳು ಎಕ್ಸ್ಟ್ರಾ ರೂಪದಲ್ಲಿ ನೀಡಿದ್ದರು. ಇದು ಕೂಡ ದಾಖಲೆಯಾಗಿದೆ.
10 / 10
9- ಏಷ್ಯನ್ ಗೇಮ್ಸ್‌ನಲ್ಲಿ ಶತಕ: ಏಷ್ಯನ್ ಗೇಮ್ಸ್‌ನಲ್ಲಿ ಮೊದಲ ಶತಕ ಸಿಡಿಸಿದ ದಾಖಲೆ ಕೂಡ ನೇಪಾಳ ತಂಡದ ಕುಶಾಲ್ ಮಲ್ಲ ಹೆಸರಿಗೆ ಸೇರ್ಪಡೆಯಾಗಿದೆ. ಈ ಪಂದ್ಯದಲ್ಲಿ ಕುಶಾಲ್ 50 ಎಸೆತಗಳಲ್ಲಿ 12 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ ಅಜೇಯ 137 ರನ್ ಬಾರಿಸಿದ್ದಾರೆ.