ವಿರಾಟ್ ಕೊಹ್ಲಿಯ ಆರ್ಭಟಕ್ಕೆ ಪಂಟರ್ ಪಾಂಟಿಂಗ್ ದಾಖಲೆ ಬ್ರೇಕ್
Virat Kohli Record: ರೋಹಿತ್ ಶರ್ಮಾ ಜೊತೆಗೂಡಿ 70 ರನ್ಗಳ ಜೊತೆಯಾಟವಾಡಿದ ಕೊಹ್ಲಿ 61 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 56 ರನ್ ಬಾರಿಸಿ ಗ್ಲೆನ್ ಮ್ಯಾಕ್ಸ್ವೆಲ್ಗೆ ವಿಕೆಟ್ ಒಪ್ಪಿಸಿದರು. ಈ ಅರ್ಧಶತಕದೊಂದಿಗೆ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ.
Updated on: Sep 27, 2023 | 9:32 PM

ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಿಂಗ್ ಕೊಹ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ರೋಹಿತ್ ಶರ್ಮಾ ಜೊತೆಗೂಡಿ 70 ರನ್ಗಳ ಜೊತೆಯಾಟವಾಡಿದ ಕೊಹ್ಲಿ 61 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 56 ರನ್ ಬಾರಿಸಿ ಗ್ಲೆನ್ ಮ್ಯಾಕ್ಸ್ವೆಲ್ಗೆ ವಿಕೆಟ್ ಒಪ್ಪಿಸಿದರು.

ಈ 56 ರನ್ಗಳೊಂದಿಗೆ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ 50+ ಸ್ಕೋರ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ಅಲ್ಲದೆ ಟಾಪ್-3 ನಲ್ಲಿ ಕಾಣಿಸಿಕೊಂಡ 2ನೇ ಭಾರತೀಯ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ 3ನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಇದ್ದರು. ಪಂಟರ್ ಖ್ಯಾತಿಯ ಪಾಂಟಿಂಗ್ 365 ಇನಿಂಗ್ಸ್ಗಳಲ್ಲಿ ಒಟ್ಟು 112 ಬಾರಿ 50 ಪ್ಲಸ್ ಸ್ಕೋರ್ ಗಳಿಸಿದ್ದರು.

ಇದೀಗ ಕಿಂಗ್ ಕೊಹ್ಲಿ ಕೇವಲ 269 ಇನಿಂಗ್ಸ್ಗಳಲ್ಲಿ 113 ಬಾರಿ 50+ ಸ್ಕೋರ್ ಗಳಿಸಿದ್ದಾರೆ. ಈ ಮೂಲಕ ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ಬಾರಿ 50 ಪ್ಲಸ್ ಸ್ಕೋರ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ.

ಸದ್ಯ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಕ್ರಿಕೆಟ್ ದೇವರು 452 ಇನಿಂಗ್ಸ್ಗಳಲ್ಲಿ ಒಟ್ಟು 145 ಬಾರಿ 50+ ಸ್ಕೋರ್ಗಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಇನ್ನು ದ್ವಿತೀಯ ಸ್ಥಾನದಲ್ಲಿರುವ ಶ್ರೀಲಂಕಾದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಕುಮಾರ ಸಂಗಾಕ್ಕರ 380 ಇನಿಂಗ್ಸ್ಗಳಲ್ಲಿ ಒಟ್ಟು 118 ಬಾರಿ 50+ ಸ್ಕೋರ್ ಗಳಿಸಿದ್ದಾರೆ.

ಇದೀಗ ಮೂರನೇ ಸ್ಥಾನಕ್ಕೇರಿರುವ ವಿರಾಟ್ ಕೊಹ್ಲಿ ದ್ವಿತೀಯ ಸ್ಥಾನಕ್ಕೇರಲು ಕೇವಲ ಆರು 50+ ಸ್ಕೋರ್ಗಳ ಅವಶ್ಯಕತೆಯಿದೆ. ಹೀಗಾಗಿ ಮುಂಬರುವ ಏಕದಿನ ವಿಶ್ವಕಪ್ ಮೂಲಕ ಕಿಂಗ್ ಕೊಹ್ಲಿ ಬ್ಯಾಟ್ನಿಂದ ಮತ್ತೊಂದು ದಾಖಲೆಯನ್ನು ನಿರೀಕ್ಷಿಸಬಹುದು.
