ದಾಸ್ ಲಿಟ್ಟನ್ ದಾಸ್… ಬಾಂಗ್ಲಾ ಪರ ಹೊಸ ಇತಿಹಾಸ
Bangladesh vs Netherlands: ಬಾಂಗ್ಲಾದೇಶ್ ಹಾಗೂ ನೆದರ್ಲೆಂಡ್ಸ್ ನಡುವಣ ಮೂರನೇ ಟಿ20 ಪಂದ್ಯವು ಮಳೆಗೆ ಆಹುತಿಯಾಗಿದೆ. ಸಿಲ್ಹೆಟ್ನಲ್ಲಿ ನಡೆದ ಈ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವು 18.2 ಓವರ್ಗಳ ಬ್ಯಾಟಿಂಗ್ ಮಾಡಿತ್ತು. ಆದರೆ ಆ ಬಳಿಕ ಸುರಿದ ಧಾರಾಕಾರ ಮಳೆಯಿಂದ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಈ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಬಾರಿಸುವ ಮೂಲಕ ಲಿಟ್ಟನ್ ದಾಸ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ.
Updated on: Sep 04, 2025 | 7:55 AM

ನೆದರ್ಲೆಂಡ್ಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡದ ನಾಯಕ ಲಿಟ್ಟನ್ ದಾಸ್ (Litton das) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಭರ್ಜರಿ ಬ್ಯಾಟಿಂಗ್ನೊಂದಿಗೆ ವಿಶೇಷ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ. ಸಿಲ್ಹೆಟ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ಲೆಂಡ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ಪರ ಲಿಟ್ಟನ್ ದಾಸ್ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ದಾಸ್ ನೆದರ್ಲೆಂಡ್ಸ್ ಬೌಲರ್ಗಳ ಬೆಂಡೆತ್ತಲಾರಂಭಿಸಿದರು. ಪರಿಣಾಮ 27 ಎಸೆತಗಳಲ್ಲಿ ಅರ್ಧಶತಕ ಮೂಡಿಬಂತು.

ಈ ಅರ್ಧಶತಕದ ಬಳಿಕ ಕೂಡ ಅಬ್ಬರ ಮುಂದುವರೆಸಿದ ಲಿಟ್ಟನ್ ದಾಸ್ 46 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಹಾಗೂ 6 ಫೋರ್ಗಳೊಂದಿಗೆ 73 ರನ್ ಬಾರಿಸಿದರು. ಈ 73 ರನ್ಗಳೊಂದಿಗೆ ಲಿಟ್ಟನ್ ದಾಸ್ ಬಾಂಗ್ಲಾದೇಶ್ ಪರ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಅದು ಸಹ 50+ ಸ್ಕೋರ್ಗಳಿಸುವ ವಿಷಯದಲ್ಲಿ ಅಗ್ರಸ್ಥಾನಕ್ಕೇರುವ ಮೂಲಕ ಎಂಬುದು ವಿಶೇಷ.

ಬಾಂಗ್ಲಾದೇಶ್ ಪರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ 50+ ಸ್ಕೋರ್ಗಳಿಸಿದ ದಾಖಲೆ ಶಕೀಬ್ ಅಲ್ ಹಸನ್ ಹೆಸರಿನಲ್ಲಿತ್ತು. ಬಾಂಗ್ಲಾ ಪರ 127 ಟಿ20 ಪಂದ್ಯಗಳನ್ನಾಡಿರುವ ಶಕೀಬ್ ಒಟ್ಟು 13 ಬಾರಿ 50+ ಸ್ಕೋರ್ಗಳಿಸಿ ಈ ದಾಖಲೆ ನಿರ್ಮಿಸಿದ್ದರು.

ಇದೀಗ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಲಿಟ್ಟನ್ ದಾಸ್ ಯಶಸ್ವಿಯಾಗಿದ್ದಾರೆ. ಬಾಂಗ್ಳಾದೇಶ್ ಪರ ಈವರೆಗೆ 108 ಪಂದ್ಯಗಳನ್ನಾಡಿರುವ ದಾಸ್ 14 ಬಾರಿ 50+ ಸ್ಕೋರ್ಗಳಿಸಿದ್ದಾರೆ. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಐವತ್ತಕ್ಕಿಂತ ಹೆಚ್ಚು ರನ್ಗಳಿಸಿ ಬ್ಯಾಟರ್ ಎನಿಸಿಕೊಂಡಿದ್ದಾರೆ.




