IPL 2023: ಇಂಡಿಯನ್ ಪ್ರೀಮಿಯರ್ ಲೀಗ್ನ 16ನೇ ಆವೃತ್ತಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇನ್ನು ಎಲ್ಲಾ ತಂಡಗಳಿಗೆ ಉಳಿದಿರುವುದು ಕೇವಲ ಒಂದೊಂದು ಪಂದ್ಯ ಮಾತ್ರ. ಆದರೆ ಈ ಪಂದ್ಯಕ್ಕಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ತನ್ನ ಜೆರ್ಸಿಯನ್ನು ಬದಲಿಸಿದೆ.
ಈ ಹಿಂದೆ 13 ಪಂದ್ಯಗಳಲ್ಲಿ ಗಾಢ ನೀಲಿ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿದಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಮುಂದಿನ ಪಂದ್ಯದಲ್ಲಿ ಮರೂನ್ ಬಣ್ಣದ ಸಮವಸ್ತ್ರದಲ್ಲಿ ಕಣಕ್ಕಿಳಿಯಲಿದೆ. ಹೀಗೆ ದಿಢೀರ್ ಜೆರ್ಸಿ ಬದಲಿಸಲು ಕಾರಣ ಕೂಡ ಇದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡವು ತನ್ನ ಕೊನೆಯ ಪಂದ್ಯವನ್ನು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡಲಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಲಕ್ನೋ ಜೆರ್ಸಿ ಬಣ್ಣ ಬದಲಿಸಿದೆ. ಇದಕ್ಕೆ ಮುಖ್ಯ ಕಾರಣ ಕೆಕೆಆರ್ ತಂಡದ ತವರು ಮೈದಾನದಲ್ಲಿ ಈ ಪಂದ್ಯ ನಡೆಯುತ್ತಿರುವುದು.
ಅಂದರೆ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಲಕ್ನೋಗಿಂತ ಕೆಕೆಆರ್ ತಂಡಕ್ಕೆ ಹೆಚ್ಚಿನ ಪ್ರೇಕ್ಷಕರ ಬೆಂಬಲ ದೊರೆಯಲಿದೆ. ಆದರೆ ಈ ಬೆಂಬಲಕ್ಕೆ ಮಾಸ್ಟರ್ ಸ್ಟ್ರೋಕ್ ನೀಡಲು ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಪ್ಲ್ಯಾನ್ ರೂಪಿಸಿದ್ದಾರೆ.
ಅದಕ್ಕಾಗಿ ಆಯ್ಕೆ ಮಾಡಿಕೊಂಡಿದ್ದೇ ಲಕ್ನೋ ತಂಡದ ಜೆರ್ಸಿ ಬದಲಾವಣೆ. ಅಂದರೆ ಪಶ್ಚಿಮ ಬಂಗಾಳದ ಜನರು ಕ್ರಿಕೆಟ್ ಅನ್ನು ಎಷ್ಟು ಪ್ರೀತಿಸುತ್ತಾರೋ, ಅಷ್ಟೇ ಫುಟ್ಬಾಲ್ ಅನ್ನು ಪ್ರೀತಿಸುತ್ತಾರೆ. ಅದರಲ್ಲೂ ಬಂಗಾಳದ ಪ್ರತಷ್ಠಿತ ಫುಟ್ಬಾಲ್ ಕ್ಲಬ್ ATK ಮೋಹನ್ ಬಗಾನ್ಗೆ ಅಪಾರ ಅಭಿಮಾನಿಗಳಿದ್ದಾರೆ.
ಇತ್ತ ಮೋಹನ್ ಬಗಾನ್ ಕ್ಲಬ್ನ ಮಾಲೀಕರು ಕೂಡ ಸಂಜೀವ್ ಗೋಯೆಂಕಾ. ಅಂದರೆ ಇಂಡಿಯನ್ ಸೂಪರ್ ಲೀಗ್ (ಫುಟ್ಬಾಲ್) ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಗೋಯೆಂಕಾ ತಂಡಗಳನ್ನು ಹೊಂದಿದ್ದು, ಇದೀಗ ಇದನ್ನೇ ಮಾಸ್ಟರ್ ಸ್ಟ್ರೋಕ್ ಆಗಿ ಬಳಸಿ ಕೊಲ್ಕತ್ತಾ ಅಭಿಮಾನಿಗಳ ಮನಗೆಲ್ಲಲು ಪ್ಲ್ಯಾನ್ ರೂಪಿಸಿದ್ದಾರೆ.
ಅದರಂತೆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಆಟಗಾರರು ಮೋಹನ್ ಬಗಾನ್ ಕ್ಲಬ್ನ ಜೆರ್ಸಿಯನ್ನು ಪ್ರತಿನಿಧಿಸುವ ಹಸಿರು-ಮರೂನ್ ಜೆರ್ಸಿಯಲ್ಲಿ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಕಣಕ್ಕಿಳಿಯಲಿದ್ದಾರೆ.