IPL 2023: ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 65ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ತಮ್ಮ ಶತಕದ ಸಂಖ್ಯೆಯನ್ನು ಆರಕ್ಕೇರಿಸಿದ್ದಾರೆ.
ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಕಿಂಗ್ ಕೊಹ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಕೊಹ್ಲಿ ಆ ಬಳಿಕ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದರು.
ಪರಿಣಾಮ 62 ಎಸೆತಗಳಲ್ಲಿ ಶತಕ ಪೂರೈಸಿದರು. ವಿಶೇಷ ಎಂದರೆ ಐಪಿಎಲ್ನಲ್ಲಿ ಇದು 4 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ಬ್ಯಾಟ್ನಿಂದ ಮೂಡಿಬಂದ ಶತಕವಾಗಿದೆ.
ಕಿಂಗ್ ಕೊಹ್ಲಿ 2019 ರಲ್ಲಿ ಕೆಕೆಆರ್ ವಿರುದ್ಧ ಕೊನೆಯ ಬಾರಿ ಶತಕ ಬಾರಿಸಿದ್ದರು. ಇದೀಗ ಎಸ್ಆರ್ಹೆಚ್ ವಿರುದ್ಧ ಸ್ಪೋಟಕ ಶತಕ ಸಿಡಿಸುವ ಮೂಲಕ ಮತ್ತೊಮ್ಮೆ ಮೂರಂಕಿ ರನ್ ಕಲೆಹಾಕಿದ್ದಾರೆ.
ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ (71) ಜೊತೆಗೂಡಿ ಮೊದಲ ವಿಕೆಟ್ಗೆ ದಾಖಲೆಯ 172 ರನ್ಗಳ ಜೊತೆಯಾಟವಾಡಿದ್ದರು. ಕಿಂಗ್ ಕೊಹ್ಲಿ ಹಾಗೂ ಫಾಫ್ ಜೊತೆಗಾರಿಕೆ ನಡುವೆ ಎಸ್ಆರ್ಹೆಚ್ ಬೌಲರ್ಗಳು ಲಯ ತಪ್ಪಿದರು.
ಇತ್ತ ಈ ಸ್ಪೋಟಕ ಶತಕದೊಂದಿಗೆ ಆರ್ಸಿಬಿಯನ್ನು ಗೆಲುವಿನ ದಡದತ್ತ ಸಾಗಿಸಿ ವಿರಾಟ್ ಕೊಹ್ಲಿ (100) ಭುವನೇಶ್ವರ್ ಕುಮಾರ್ಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ 19.2 ಓವರ್ಗಳಲ್ಲಿ 187 ರನ್ಗಳ ಗುರಿ ಮುಟ್ಟುವ ಮೂಲಕ ಆರ್ಸಿಬಿ ತಂಡವು ಎಸ್ಆರ್ಹೆಚ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
Published On - 10:54 pm, Thu, 18 May 23