Updated on: Feb 09, 2023 | 6:32 PM
Ranji Trophy 2022-23: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ 2ನೇ ಸೆಮಿಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಭರ್ಜರಿ ದ್ವಿಶತಕ ಸಿಡಿಸಿ ಅಬ್ಬರಿಸಿದ್ದಾರೆ. ಮೊದಲ ದಿನದಾಟದಲ್ಲಿ ಶತಕ ಪೂರೈಸಿದ್ದ ಮಯಾಂಕ್ 2ನೇ ದಿನದಾಟದಲ್ಲಿ ಡಬಲ್ ಸೆಂಚುರಿ ಪೂರೈಸಿ ಮಿಂಚಿದರು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌರಾಷ್ಟ್ರ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 3 ರನ್ಗಳಿಸಿ ರವಿಕುಮಾರ್ ಸಮರ್ಥ್ ನಿರ್ಗಮಿಸಿದರು. ಆ ಬಳಿಕ ಬಂದ ದೇವದತ್ ಪಡಿಕ್ಕಲ್ ಕೂಡ 9 ರನ್ಗಳಿಸಿ ಪೆವಿಲಿಯನ್ಗೆ ಹಿಂತಿರುಗಿದರು. ಇದಾಗ್ಯೂ ನಾಯಕ ಮಯಾಂಕ್ ಅಗರ್ವಾಲ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು.
ಎಚ್ಚರಿಕೆಯ ಬ್ಯಾಟಿಂಗ್ನೊಂದಿಗೆ ರನ್ ಗತಿ ಹೆಚ್ಚಿಸುತ್ತಾ ಸಾಗಿದ ಮಯಾಂಕ್ ಅಗರ್ವಾಲ್ 216 ಎಸೆತಗಳಲ್ಲಿ ಶತಕ ಪೂರೈಸಿದರು. ಆದರೆ ಮತ್ತೊಂದೆಡೆ 18 ರನ್ಗಳಿಸಿದ ನಿಕಿನ್ ಜೋಸ್, ಮನೀಷ್ ಪಾಂಡೆ (7) ಹಾಗೂ ಶ್ರೇಯಸ್ ಗೋಪಾಲ್ (15) ಹೆಚ್ಚು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ಈ ಹಂತದಲ್ಲಿ ಜೊತೆಗೂಡಿದ ಮಯಾಂಕ್ ಅಗರ್ವಾಲ್ - ಶ್ರೀನಿವಾಸ್ ಶರತ್ ಶತಕದ ಜೊತೆಯಾಟವಾಡಿದರು. ಪರಿಣಾಮ ಮೊದಲ ದಿನಾದಾಟದ ಮೂರನೇ ಸೆಷನ್ನಲ್ಲಿ ಕರ್ನಾಟಕ ತಂಡದ ಮೊತ್ತವು 200 ರ ಗಡಿದಾಟಿತು. ಇದರ ನಡುವೆ ಶ್ರೀನಿವಾಸ್ ಶರತ್ ಅರ್ಧಶತಕ ಪೂರೈಸಿದರು.
ಅದರಂತೆ ಮೊದಲ ದಿನದಾಟದ ಮುಕ್ತಾಯದ ವೇಳೆಗೆ ಕರ್ನಾಟಕ ತಂಡವು ಮೊದಲ ಇನಿಂಗ್ಸ್ನಲ್ಲಿ 5 ವಿಕೆಟ್ ಕಳೆದುಕೊಂಡು 229 ರನ್ ಕಲೆಹಾಕಿತು. 110 ರನ್ ಬಾರಿಸಿರುವ ಮಯಾಂಕ್ ಅಗರ್ವಾಲ್ ಹಾಗೂ ಶ್ರೀನಿವಾಸ್ ಶರತ್ (58) 2ನೇ ದಿನದಾಟಕ್ಕೆ ಬ್ಯಾಟಿಂಗ್ ಮುಂದುವರೆಸಿದರು.
ಆದರೆ ವೈಯುಕ್ತಿಕ ಮೊತ್ತಕ್ಕೆ 8 ರನ್ ಸೇರಿಸುವಷ್ಟರಲ್ಲಿ ಶ್ರೀನಿವಾಸ್ ಶರತ್ (66) ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಬೌಲರ್ಗಳೊಂದಿಗೆ ಇನಿಂಗ್ಸ್ ಕಟ್ಟಿದ ಮಯಾಂಕ್ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದರು. ಪರಿಣಾಮ 367 ಎಸೆತಗಳಲ್ಲಿ ಭರ್ಜರಿ ದ್ವಿಶತಕ ಪೂರೈಸಿದರು. ಈ ಮೂಲಕ ತವರು ಮೈದಾನದಲ್ಲಿ ದ್ವಿಶತಕದ ಸಾಧನೆ ಮಾಡಿದರು. ಅಷ್ಟೇ ಅಲ್ಲದೆ ತಂಡದ ಮೊತ್ತವನ್ನು 350 ರ ಗಡಿದಾಟಿಸಿದರು.
ಡಬಲ್ ಸೆಂಚುರಿ ಬಳಿಕ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಮಯಾಂಕ್ ಸೌರಾಷ್ಟ್ರ ಬೌಲರ್ಗಳ ಬೆಂಡೆತ್ತಿದರು. ಅದರಂತೆ 6 ಭರ್ಜರಿ ಸಿಕ್ಸ್ ಹಾಗೂ 28 ಫೋರ್ಗಳನ್ನು ಬಾರಿಸಿ ತಂಡದ ಮೊತ್ತವನ್ನು 400 ರ ಗಡಿಯನ್ನು ದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಆದರೆ ಈ ಹಂತದಲ್ಲಿ ಸ್ಟ್ರೈಕ್ ಪಡೆಯುವ ಯತ್ನಕ್ಕಾಗಿ ರನ್ ಓಡಿದ ಮಯಾಂಕ್ ಅಗರ್ವಾಲ್ (249) ರನೌಟ್ ಆದರು. ಇದರೊಂದಿಗೆ ಕರ್ನಾಟಕ ತಂಡದ ಮೊದಲ ಇನಿಂಗ್ಸ್ 407 ರನ್ಗಳಿಗೆ ಅಂತ್ಯವಾಯ್ತು. ಸದ್ಯ ಸೌರಾಷ್ಟ್ರ ತಂಡ ಮೊದಲ ಇನಿಂಗ್ಸ್ ಆರಂಭಿಸಿದೆ.