ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಿಂದ ಗೆದ್ದು ಬೀಗಿದ ಪಾಕಿಸ್ತಾನದ ಪುರುಷರ ಕ್ರಿಕೆಟ್ ತಂಡ ಐಸಿಸಿ ಏಕದಿನ ತಂಡಗಳ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಲು ಇನ್ನೊಂದು ಹೆಜ್ಜೆ ಹಿಂದೆ ಇದೆ.
ನೂತನ ಐಸಿಸಿ ಏಕದಿನ ಶ್ರೇಯಾಂಕದಲ್ಲಿ 118 ರೇಟಿಂಗ್ ಪಾಯಿಂಟ್ ಸಂಪಾಧಿಸಿರುವ ಪಾಕಿಸ್ತಾನ ಪ್ರಸ್ತುತ 2ನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಕೂಡ ಇಷ್ಟೇ ಸಂಖ್ಯೆಯ ರೇಟಿಂಗ್ ಪಾಯಿಂಟ್ ಹೊಂದಿದೆ. ಆದರೆ ಅದು ಪಾಯಿಂಟ್ಗಳ ವಿಚಾರದಲ್ಲಿ ಮುಂದಿದೆ.
ಇದೀಗ ಅಫ್ಘಾನಿಸ್ತಾನ ವಿರುದ್ಧದ ಅಂತಿಮ ಪಂದ್ಯವನ್ನು ಪಾಕ್ ಗೆದ್ದರೆ, ಅದು ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ನಂ.1 ಸ್ಥಾನವನ್ನು ಅಲಂಕರಿಸಲಿದೆ.
ಆದಾಗ್ಯೂ, ಏಕದಿನ ವಿಶ್ವಕಪ್ಗೆ ತಯಾರಿ ನಡೆಸಲು ಸೆಪ್ಟೆಂಬರ್‌ನಲ್ಲಿ ಒಟ್ಟು ಎಂಟು ಏಕದಿನ ಪಂದ್ಯಗಳನ್ನು ಆಡಲು ಆಸ್ಟ್ರೇಲಿಯಾ ಸಜ್ಜಾಗಿರುವುದರಿಂದ ಅದು ಶೀಘ್ರದಲ್ಲೇ ಮತ್ತೆ ಅಗ್ರ ಸ್ಥಾನಕ್ಕೇರುವ ಅವಕಾಶ ಪಡೆದಿದೆ. ಈ ಎಂಟು ಪಂದ್ಯಗಳ ಪೈಕಿ ಆಸ್ಟ್ರೇಲಿಯಾ, ಐದು ಪಂದ್ಯಗಳ ಏಕದಿನ ಸರಣಿಗಾಗಿ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಿದರೆ, ಆ ನಂತರ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತವನ್ನು ಎದುರಿಸಲಿದೆ.
ಇನ್ನು ಮೂರನೇ ಸ್ಥಾನದಲ್ಲಿರುವ ಟೀಂ ಇಂಡಿಯಾ, ರೇಟಿಂಗ್ಸ್ ವಿಚಾರದಲ್ಲಿ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾಕ್ಕಿಂತ ಐದು ಅಂಕಗಳಿಂದ ಹಿಂದಿದೆ.
ನ್ಯೂಜಿಲೆಂಡ್ 104 ರೇಟಿಂಗ್‌ಗಳೊಂದಿಗೆ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ.
ಪ್ರಸ್ತುತ ವಿಶ್ವ ಚಾಂಪಿಯನ್ಆಗಿರುವ ಇಂಗ್ಲೆಂಡ್ 101 ರೇಟಿಂಗ್ಸ್ನೊಂದಿಗೆ ಐದನೇ ಸ್ಥಾನದಲ್ಲಿದೆ.
ಆರನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ಇದ್ದರೆ. ಭಾರತದ ವಿರುದ್ಧ 1-2 ಅಂತರದಲ್ಲಿ ಏಕದಿನ ಸರಣಿ ಸೋತ ವೆಸ್ಟ್ ಇಂಡೀಸ್ 7ನೇ ಸ್ಥಾನದಲ್ಲಿದೆ.
ಆ ನಂತರ ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ ತಂಡಗಳು ಕ್ರಮವಾಗಿ 8, 9 ಹಾಗೂ 10ನೇ ಸ್ಥಾನವನ್ನು ಪಡೆದುಕೊಂಡಿವೆ.