
ಟೀಂ ಇಂಡಿಯಾದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ವೃತ್ತಿಜೀವನ ಕೊನೆಗೊಳ್ಳುತ್ತಿರುವಂತೆ ತೋರುತ್ತಿದೆ. ಫಿಟ್ನೆಸ್ ಸಮಸ್ಯೆಗಳಿಂದಾಗಿ ಸ್ವಲ್ಪ ಸಮಯದಿಂದ ಹೊರಗುಳಿದಿದ್ದ ಶಮಿ ಅವರನ್ನು ಈಗ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೂ ತಂಡದಿಂದ ಕೈಬಿಡಲಾಗಿದೆ. ಬಿಸಿಸಿಐನ ಈ ನಡೆ ಸಾಕಷ್ಟು ಪ್ರಶ್ನೆಯನ್ನು ಹುಟ್ಟುಹಾಕಿದ್ದು, ಭಾರತ ತಂಡದಲ್ಲಿ ಶಮಿ ಯುಗಾಂತ್ಯ ಅಂತಲೇ ಹೇಳಬಹುದು.

ನವೆಂಬರ್ 5 ರ ಬುಧವಾರದಂದು ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟೆಸ್ಟ್ ಸರಣಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿತು. ರಿಷಭ್ ಪಂತ್ ತಂಡಕ್ಕೆ ಮರಳಿದ್ದು, ಪ್ರಸಿದ್ಧ್ ಕೃಷ್ಣ ಬದಲಿಗೆ ವೇಗದ ಬೌಲರ್ ಆಕಾಶ್ ದೀಪ್ ಅವರನ್ನು ಆಯ್ಕೆ ಮಾಡಲಾಗಿದೆ. ಆದಾಗ್ಯೂ, ಹಿರಿಯ ಅನುಭವಿ ವೇಗಿ ಶಮಿ ಅವರನ್ನು ಮತ್ತೊಮ್ಮೆ ಕಡೆಗಣಿಸಲಾಗಿದೆ.

ಇತ್ತೀಚೆಗೆ, ಆಸ್ಟ್ರೇಲಿಯಾ ಪ್ರವಾಸದ ಏಕದಿನ ಸರಣಿಯಿಂದ ಶಮಿ ಅವರನ್ನು ಕೈಬಿಟ್ಟ ಬಗ್ಗೆ ಕೇಳಿದಾಗ, ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರ ಫಿಟ್ನೆಸ್ ಅನ್ನು ಉಲ್ಲೇಖಿಸಿದರು. ಅಗರ್ಕರ್ ನಂತರ ಅವರು ಸಂಪೂರ್ಣವಾಗಿ ಫಿಟ್ ಆಗಿದ್ದರೆ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಎರಡು ಪ್ರವಾಸಕ್ಕೂ ತಂಡದಲ್ಲಿ ಆಯ್ಕೆ ಮಾಡುತ್ತಿದ್ದೇವು ಎಂದಿದ್ದರು. ಅಲ್ಲದೆ ಶಮಿ ರಣಜಿ ಟ್ರೋಫಿಯಲ್ಲಿ ಆಡುತ್ತಿದ್ದಾರೆ ಮತ್ತು ನಂತರ ಪರಿಗಣಿಸಲಾಗುವುದು ಎಂದು ಅಗರ್ಕರ್ ಹೇಳಿದ್ದರು.

ಅಂದಿನಿಂದ ಶಮಿ ಬಂಗಾಳ ಪರ ಸತತ ಮೂರು ರಣಜಿ ಟ್ರೋಫಿ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 15 ವಿಕೆಟ್‌ಗಳನ್ನು ಕಬಳಿಸಿದ್ದು, ತಂಡವು ಎರಡು ಪಂದ್ಯಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಈ ಅವಧಿಯಲ್ಲಿ, ಶಮಿ ಎರಡು ಇನ್ನಿಂಗ್ಸ್‌ಗಳಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹಾಗೆಯೇ 3 ಪಂದ್ಯಗಳಲ್ಲಿ ಒಟ್ಟು 95 ಓವರ್‌ಗಳನ್ನು ಸಹ ಬೌಲಿಂಗ್ ಮಾಡಿದ್ದಾರೆ.

ರಣಜಿಯಲ್ಲಿ ಶಮಿ ಅವರ ಪ್ರದರ್ಶನ ಅತ್ಯುತ್ತಮವಾಗಿದ್ದರಿಂದ ಅವರನ್ನು ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅಗರ್ಕರ್ ಮತ್ತು ತಂಡದ ಆಡಳಿತ ಮಂಡಳಿಯು ಶಮಿ ಅವರನ್ನು ಮತ್ತೊಮ್ಮೆ ಕಡೆಗಣಿಸಿದೆ. ಶಮಿ ಅವರನ್ನು ಏಕೆ ಆಯ್ಕೆ ಮಾಡಲಾಗಿಲ್ಲ ಎಂಬುದಕ್ಕೆ ಕಾರಣ ನೀಡಿಲ್ಲವಾದರೂ, ಯುವ ಆಟಗಾರರಿಗೆ ಅವಕಾಶ ನೀಡುವ ಸಲುವಾಗಿ ಶಮಿಯನ್ನು ತಂಡದಿಂದ ಹೊರಗಿಟ್ಟಿರಬಹುದು.