
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಮೊಹಮ್ಮದ್ ಶಮಿ (Mohammed Shami) ಅವರನ್ನು ಆಯ್ಕೆ ಮಾಡಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಫಿಟ್ನೆಸ್ ಸಮಸ್ಯೆ ಎನ್ನಲಾಗಿತ್ತು. ಇದಾದ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಶಮಿ ಅವರನ್ನು ಪರಿಗಣಿಸಿರಲಿಲ್ಲ. ಈ ವೇಳೆಯೂ ಆಯ್ಕೆಗಾರರಿಂದ ಕೇಳಿ ಬಂದ ಉತ್ತರ ಫಿಟ್ನೆಸ್ ಸಮಸ್ಯೆ.

ಆಯ್ಕೆಗಾರರ ಈ ನಿರ್ಲಕ್ಷ್ಯದ ಹೊರತಾಗಿಯೂ ಮೊಹಮ್ಮದ್ ಶಮಿ ಈ ಬಾರಿ ರಣಜಿ ಟೂರ್ನಿಯಲ್ಲಿ ಬಂಗಾಳ ಪರ ಕಣಕ್ಕಿಳಿದಿದ್ದರು. ಅಲ್ಲದೆ ಮೊದಲ ಪಂದ್ಯದಲ್ಲಿ ಉತ್ತರಾಖಂಡ್ ವಿರುದ್ಧ 75 ರನ್ಗೆ 7 ವಿಕೆಟ್ ಕಬಳಿಸಿ ಮಿಂಚಿದ್ದರು. ಅಲ್ಲದೆ ಈ ಭರ್ಜರಿ ಪ್ರದರ್ಶನದೊಂದಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ಇದೀಗ ದ್ವಿತೀಯ ಪಂದ್ಯದಲ್ಲೂ ಮೊಹಮ್ಮದ್ ಶಮಿ ಮಿಂಚಿನ ದಾಳಿ ಸಂಘಟಿಸಿದ್ದಾರೆ. ಗುಜರಾತ್ ವಿರುದ್ಧದ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 44 ರನ್ ನೀಡಿ 3 ವಿಕೆಟ್ ಕಬಳಿಸಿದ ಶಮಿ, ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 38 ರನ್ ನೀಡಿ 5 ವಿಕೆಟ್ ಉರುಳಿಸಿದ್ದಾರೆ. ಈ ಮೂಲಕ ಒಟ್ಟು 8 ವಿಕೆಟ್ ಕಬಳಿಸಿ ಬಂಗಾಳ ತಂಡಕ್ಕೆ ಜಯ ತಂದು ಕೊಟ್ಟಿದ್ದಾರೆ.

ಅಂದರೆ ಅನ್ಫಿಟ್ ಎಂದು ಸೈಡ್ ಲೈನ್ ಮಾಡಲಾಗಿದ್ದ ಮೊಹಮ್ಮದ್ ಶಮಿ ಈ ಬಾರಿಯ ರಣಜಿಯ ಮೊದಲೆರಡು ಪಂದ್ಯಗಳಿಂದಲೇ 15 ವಿಕೆಟ್ ಉರುಳಿಸಿದ್ದಾರೆ. ಈ ಮೂಲಕ ಚೆಂಡಿನ ಮೂಲಕವೇ ಆಯ್ಕೆಗಾರರಿಗೆ ಶಮಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಅಂದಹಾಗೆ ಮೊಹಮ್ಮದ್ ಶಮಿ ಟೀಮ್ ಇಂಡಿಯಾ ಪರ ಕೊನೆಯ ಬಾರಿ ಟೆಸ್ಟ್ ಪಂದ್ಯವಾಡಿದ್ದು 2023 ರಲ್ಲಿ. ಇದಾಗ್ಯೂ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಶಮಿ ಕಣಕ್ಕಿಳಿದಿದ್ದರು. ಹೀಗಾಗಿ ಅವರು ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದರು. ಆದರೆ ಆಯ್ಕೆ ಸಮಿತಿಯು ಶಮಿಯನ್ನು ನಿರ್ಲಕ್ಷಿಸಿ ಹರ್ಷಿತ್ ರಾಣಾ ಅವರನ್ನು ಆಯ್ಕೆ ಮಾಡಿದ್ದರು.

ಇದೀಗ ದೇಶೀಯ ಅಂಗಳದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶಿಸಿ ಮೊಹಮ್ಮದ್ ಶಮಿ ಮತ್ತೆ ಕಂಬ್ಯಾಕ್ ಮಾಡುವ ಸೂಚನೆ ನೀಡಿದ್ದಾರೆ. ಇದೇ ಪ್ರದರ್ಶನ ಮುಂದುವರೆಸಿದರೆ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಮೊಹಮ್ಮದ್ ಶಮಿ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಬಹುದು.