Suiiiiii… ಬರೋಬ್ಬರಿ 43 ವಿಕೆಟ್ ಕಬಳಿಸಿದ ಮೊಹಮ್ಮದ್ ಸಿರಾಜ್
Mohammed Siraj: ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಅ್ಯಂಡರ್ಸನ್-ತೆಂಡೂಲ್ಕರ್ ಸರಣಿಯಲ್ಲಿ ಎಲ್ಲಾ ಇನಿಂಗ್ಸ್ನಲ್ಲೂ ಕಾಣಿಸಿಕೊಂಡ ಏಕೈಕ ವೇಗಿ ಮೊಹಮ್ಮದ್ ಸಿರಾಜ್. ಇದರ ನಡುವೆ ಬರೋಬ್ಬರಿ 1113 ಎಸೆತಗಳನ್ನು ಸಹ ಎಸೆದಿದ್ದಾರೆ. ಈ ಮೂಲಕ ಭಾರತದ ಪರ ಒಂದೇ ಸರಣಿಯಲ್ಲಿ ಸಾವಿರಕ್ಕೂ ಎಸೆತಗಳನ್ನು ಎಸೆದ ಕೆಲವೇ ಕೆಲವು ಬೌಲರ್ಗಳ ಪಟ್ಟಿಯಲ್ಲೂ ಸಿರಾಜ್ ಸ್ಥಾನ ಪಡೆದಿದ್ದಾರೆ.
Updated on:Aug 05, 2025 | 9:04 AM

ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 2 ಗೆಲುವು ದಾಖಲಿಸಿದೆ. ಈ ಎರಡು ಗೆಲುವುಗಳ ರೂವಾರಿ ಮೊಹಮ್ಮದ್ ಸಿರಾಜ್ (Mohammed Siraj). ಏಕೆಂದರೆ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಸಿರಾಜ್ 6 ವಿಕೆಟ್ ಕಬಳಿಸಿದ್ದರು. ಇನ್ನು ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಐದನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ 5 ವಿಕೆಟ್ ಉರುಳಿಸಿ ಮಿಂಚಿದ್ದಾರೆ.

ಇದರೊಂದಿಗೆ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಮೊಹಮ್ಮದ್ ಸಿರಾಜ್ 23 ವಿಕೆಟ್ಗಳೊಂದಿಗೆ ಅಂತ್ಯಗೊಳಿಸಿದ್ದಾರೆ. ಈ 23 ವಿಕೆಟ್ಗಳೊಂದಿಗೆ ಸಿರಾಜ್ ಕಳೆದ 10 ಪಂದ್ಯಗಳಲ್ಲಿ ಪಡೆದಿರುವ ವಿಕೆಟ್ಗಳ ಸಂಖ್ಯೆ ಬರೋಬ್ಬರಿ 43 ಎಂದರೆ ನಂಬಲೇಬೇಕು. ಅದು ಸಹ ಸತತ ಪಂದ್ಯಗಳನ್ನಾಡುವ ಮೂಲಕ ಎಂಬುದು ಇಲ್ಲಿ ಉಲ್ಲೇಖಾರ್ಹ.

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಎಲ್ಲಾ ಮ್ಯಾಚ್ಗಳಲ್ಲೂ ಕಣಕ್ಕಿಳಿದಿದ್ದ ಸಿರಾಜ್ ಒಟ್ಟು 20 ವಿಕೆಟ್ ಕಬಳಿಸಿ ಮಿಂಚಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎಲ್ಲಾ ಇನಿಂಗ್ಸ್ಗಳಲ್ಲೂ ಕಾಣಿಸಿಕೊಂಡ ಏಕೈಕ ಬೌಲರ್ ಆಗಿ ಮೊಹಮ್ಮದ್ ಸಿರಾಜ್ ಹೊರಹೊಮ್ಮಿದ್ದಾರೆ.

ಆಂಗ್ಲರ ವಿರುದ್ಧ 9 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಮೊಹಮ್ಮದ್ ಸಿರಾಜ್ ಒಟ್ಟು 185.3 ಓವರ್ಗಳನ್ನು ಎಸೆದಿದ್ದಾರೆ. ಈ ವೇಳೆ 1113 ಎಸೆತಗಳಲ್ಲಿ 23 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಅ್ಯಂಡರ್ಸನ್-ತೆಂಡೂಲ್ಕರ್ ಸರಣಿಯಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿ ಬೌಲರ್ ಎನಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಕಳೆದ 10 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿದ ಏಕೈಕ ವೇಗದ ಬೌಲರ್ ಎಂಬ ಹೆಗ್ಗಳಿಕೆಯನ್ನು ಮೊಹಮ್ಮದ್ ಸಿರಾಜ್ ತಮ್ಮದಾಗಿಸಿಕೊಂಡಿದ್ದಾರೆ. ಹೀಗೆ ದಣಿವರಿಯದೇ ಸತತ ಪಂದ್ಯಗಳನ್ನಾಡಿರುವ ಸಿರಾಜ್ 10 ಮ್ಯಾಚ್ಗಳ ಮೂಲಕ 43 ವಿಕೆಟ್ ಉರುಳಿಸಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.
Published On - 9:04 am, Tue, 5 August 25
