
ಐಪಿಎಲ್ 2026 ಆರಂಭವಾಗಲು ಇನ್ನೂ ಸಾಕಷ್ಟು ಸಮಯ ಉಳಿದಿದೆ. ಈ ಲೀಗ್ನ ಮಿನಿ ಹರಾಜು ಕೂಡ ಮುಂದಿನ ತಿಂಗಳು ನಡೆಯಲಿದೆ. ಇದಕ್ಕಾಗಿ ಎಲ್ಲಾ ಫ್ರಾಂಚೈಸಿಗಳು ತಯಾರಿಯಲ್ಲಿ ತೊಡಗಿವೆ. ಆದರೆ ಈ ಮಿನಿ ಹರಾಜು ನಡೆಯುವುದಕ್ಕೂ ಮುನ್ನವೇ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಧೋನಿ ಐಪಿಎಲ್ 2026 ರಲ್ಲಿ ಆಡುತ್ತಾರೆಯೇ ಎಂಬ ಪ್ರಶ್ನೆಗೆ ಸಿಎಸ್‌ಕೆ ಸಿಇಒ ಉತ್ತರಿಸಿದ್ದಾರೆ.

2026 ರ ಐಪಿಎಲ್ನಲ್ಲಿ ಧೋನಿ ಆಡುವ ಬಗ್ಗೆ ಇದುವರೆಗೆ ಅನುಮಾನಗಳಿದ್ದವು. ಆದಾಗ್ಯೂ ಈ ಬಗ್ಗೆ ಸ್ಪಷ್ಟನೆ ನೀಡಿರುವ ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಸಿ ವಿಶ್ವನಾಥನ್ ಅವರು ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಹೊಂದುತ್ತಿಲ್ಲ ಮತ್ತು ಐಪಿಎಲ್ 2026 ರಲ್ಲಿ ಅವರು ಆಡಲಿದ್ದಾರೆ ಎಂಬುದನ್ನು ದೃಢಪಡಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು , ‘ನಾವು ಐಪಿಎಲ್ 2026 ರಲ್ಲಿ ಧೋನಿ ಆಡುವುದನ್ನು ಖಂಡಿತವಾಗಿಯೂ ನೋಡುತ್ತೇವೆ" ಎಂದಿದ್ದಾರೆ.

ವಾಸ್ತವವಾಗಿ 2025 ರ ಐಪಿಎಲ್ನ ತನ್ನ ಕೊನೆಯ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಭರ್ಜರಿ ಗೆಲುವಿನೊಂದಿಗೆ ಪಂದ್ಯಾವಳಿಯನ್ನು ಮುಗಿಸಿತು. ಇದರ ನಂತರ, ಆಗ ತಂಡದ ನಾಯಕತ್ವವಹಿಸಿದ್ದ ಎಂಎಸ್ ಧೋನಿ ತಮ್ಮ ನಿವೃತ್ತಿಯ ಬಗ್ಗೆ ಯೋಚಿಸುವುದಾಗಿ ಮತ್ತು ಮುಂದಿನ ಸೀಸನ್ನಲ್ಲಿ ಆಡಲು ಸಿದ್ಧರಿದ್ದಾರೆಯೇ ಎಂದು ಮುಂಬರುವ ತಿಂಗಳುಗಳಲ್ಲಿ ನಿರ್ಧರಿಸುವುದಾಗಿ ಹೇಳಿದ್ದರು.

ಈ ವಿಷಯವನ್ನು ಪರಿಗಣಿಸಲು ತಮಗೆ ನಾಲ್ಕರಿಂದ ಐದು ತಿಂಗಳುಗಳ ಕಾಲಾವಕಾಶವಿದ್ದು, ಆತುರಪಡಲು ಬಯಸುವುದಿಲ್ಲ ಎಂದು ಧೋನಿ ಹೇಳಿದ್ದರು. ತಮ್ಮ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ಪ್ರತಿ ವರ್ಷ ಶೇಕಡಾ 50 ರಷ್ಟು ಕಠಿಣ ತರಬೇತಿ ಪಡೆಯಬೇಕು ಎಂದು ಹೇಳುವ ಮೂಲಕ ಧೋನಿ ಕೂಡ 2026 ರ ಐಪಿಎಲ್ ಆಡುವ ಬಗ್ಗೆ ಉತ್ಸುಕತೆ ತೋರಿಸಿದ್ದರು.

ವಾಸ್ತವವಾಗಿ, ಧೋನಿ ಕಳೆದ ಆವೃತ್ತಿಯಲ್ಲಿ 14 ಪಂದ್ಯಗಳ 13 ಇನ್ನಿಂಗ್ಸ್‌ಗಳಲ್ಲಿ 24.50 ರ ಸರಾಸರಿ ಮತ್ತು 135.17 ರ ಸ್ಟ್ರೈಕ್ ರೇಟ್‌ನೊಂದಿಗೆ 196 ರನ್ ಬಾರಿಸಿದ್ದರು. ಈ ಅವಧಿಯಲ್ಲಿ ಅವರ ಗರಿಷ್ಠ ಸ್ಕೋರ್ ಔಟಾಗದೆ 30 ರನ್ ಆಗಿತ್ತು. ಹಾಗೆಯೇ ಅವರು ಐದು ಪಂದ್ಯಗಳಲ್ಲಿ ಅಜೇಯರಾಗಿಯು ಉಳಿದಿದ್ದರು. ಇದು ಧೋನಿಯಲ್ಲಿ ಇನ್ನೂ ಕ್ರಿಕೆಟ್ ಉಳಿದಿದೆ ಎಂಬುದನ್ನು ಸೂಚಿಸುತ್ತಿದ್ದು, ಸಿಎಸ್‌ಕೆ ಸಿಇಒ ನೀಡಿರುವ ಹೇಳಿಕೆ ಪ್ರಕಾರ ಅವರು ಮುಂದಿನ ಐಪಿಎಲ್ ಆಡುವುದು ಖಚಿತವಾಗಿದೆ.