ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್‌ಗೆ ಈ ಸೀಸನ್ನಲ್ಲಿ ಉತ್ತಮ ಆರಂಭ ಸಿಕ್ಕಿಲ್ಲ. ಮೊದಲ ಪಂದ್ಯದಲ್ಲಿಯೇ ಮುಂಬೈ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಅನುಭವಿಸಿತ್ತು. ಮೊದಲ ಪಂದ್ಯದಲ್ಲಿ ಸೋತ ನಂತರ, ಮುಂಬೈ ತನ್ನ ಎರಡನೇ ಪಂದ್ಯವನ್ನು ಅಹಮದಾಬಾದ್ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸುತ್ತಿದೆ.
ಈ ಪಂದ್ಯದಲ್ಲಿ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಕೂಡ ತಂಡಕ್ಕೆ ಮರಳಿದ್ದಾರೆ. ಆದರೆ ಹಾರ್ದಿಕ್ ತಂಡಕ್ಕೆ ಬಂದ ತಕ್ಷಣ, ಮೊದಲ ಪಂದ್ಯದಲ್ಲಿ ತಂಡದ ಅತ್ಯುತ್ತಮ ಆಟಗಾರ ಎಂದು ಸಾಬೀತುಪಡಿಸಿದ ವಿಘ್ನೇಶ್ ಪುತೂರ್ ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈಬಿಡಲಾಗಿದೆ.
ಗುಜರಾತ್ ವಿರುದ್ಧದ ಈ ಪಂದ್ಯಕ್ಕೆ ಮುಂಬೈ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ಇದರಲ್ಲಿ ವಿಲ್ ಜ್ಯಾಕ್ಸ್ ಹಾಗೂ ಎಡಗೈ ಸ್ಪಿನ್ನರ್ ವಿಘ್ನೇಶ್ ಪುತೂರ್ ಅವರನ್ನು ಕೈಬಿಟ್ಟಿದ್ದು, ಹಾರ್ದಿಕ್ ಪಾಂಡ್ಯ ಹಾಗೂ ಅಫ್ಘಾನ್ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಅವರನ್ನು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಾಗಿದೆ.
ವಿಘ್ನೇಶ್ ಅವರನ್ನು ಏಕೆ ಕೈಬಿಡಲಾಯಿತು ಎಂಬುದಕ್ಕೆ ಪ್ರಸ್ತುತ ಯಾವುದೇ ಕಾರಣವನ್ನು ನೀಡಲಾಗಿಲ್ಲ. ಅವರು ಗಾಯಗೊಂಡಿದ್ದಾರೆಯೇ ಅಥವಾ ಅನಾರೋಗ್ಯದಿಂದ ಬಳಲುತ್ತಿದ್ದಾರೆಯೇ ಎಂಬುದರ ಕುರಿತು ಫ್ರಾಂಚೈಸಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಹೀಗಿರುವಾ ಸಿಎಸ್ಕೆ ವಿರುದ್ಧ ಅಮೋಘ ಪ್ರದರ್ಶನ ನೀಡಿದ್ದ ವಿಘ್ನೇಶ್ ಅವರನ್ನು ಏತಕ್ಕೆ ಕೈಬಿಡಲಾಯಿತು ಎಂಬುದು ಕುತೂಹಲ ಕೆರಳಿಸಿದೆ.
24 ವರ್ಷದ ಸ್ಪಿನ್ನರ್ ವಿಘ್ನೇಶ್ ಚೆನ್ನೈ ವಿರುದ್ಧದ ಮೊದಲ ಪಂದ್ಯದಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಈ ಪಂದ್ಯಕ್ಕೂ ಮೊದಲು ಒಂದೇ ಒಂದು ಹಿರಿಯ ಮಟ್ಟದ ಪಂದ್ಯವನ್ನು ಆಡದ ಈ ಎಡಗೈ ಸ್ಪಿನ್ನರ್ ಮೊದಲ ಓವರ್‌ನಲ್ಲಿಯೇ ಒಂದು ವಿಕೆಟ್ ಪಡೆದು, ಮುಂದಿನ ಎರಡು ಓವರ್‌ಗಳಲ್ಲಿ ತಲಾ 1 ವಿಕೆಟ್ ಪಡೆದಿದ್ದರು.
ತಮ್ಮ ಚೊಚ್ಚಲ ಐಪಿಎಲ್ ಪಂದ್ಯದಲ್ಲಿ 3 ವಿಕೆಟ್‌ಗಳನ್ನು ಪಡೆಯುವ ಮೂಲಕ, ಆ ಪಂದ್ಯದಲ್ಲಿ ಮುಂಬೈ ಪರ ಅತ್ಯುತ್ತಮ ಆಟಗಾರ ಎಂದು ಸಾಬೀತುಪಡಿಸಿದ್ದರು. ಅಂತಹ ಪರಿಸ್ಥಿತಿಯಲ್ಲಿ, ವಿಘ್ನೇಶ್ ಅವರನ್ನು ಹೊರಗಿಡುವ ನಿರ್ಧಾರ ಆಘಾತಕಾರಿಯಾಗಿದೆ.
ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ರಯಾನ್ ರಿಕಲ್ಟನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ಟ್ರೆಂಟ್ ಬೌಲ್ಟ್, ದೀಪಕ್ ಚಾಹರ್, ಸತ್ಯನಾರಾಯಣ್ ರಾಜು, ಮುಜೀಬ್ ಉರ್ ರೆಹಮಾನ್.