
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿರುವ ಕಾರ್ಬಿನ್ ಬಾಷ್ (Corbin Bosch) ಅವರನ್ನು ಪಾಕಿಸ್ತಾನ್ ಸೂಪರ್ ಲೀಗ್ನಿಂದ ಒಂದು ವರ್ಷ ಬ್ಯಾನ್ ಮಾಡಲಾಗಿದೆ. ಇದಕ್ಕೆ ಮುಖ್ಯ ಕಾರಣ ಬಾಷ್ PSL 2025 ಕ್ಕೆ ಕೈ ಕೊಟ್ಟಿರುವುದು.

ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ 75 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಬಾಷ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಹೀಗಾಗಿ ಬಾಷ್ ಪಾಕಿಸ್ತಾನ್ ಸೂಪರ್ ಲೀಗ್ಗೆ ಹೆಸರು ನೀಡಿದ್ದರು. ಅದರಂತೆ ಪಿಎಸ್ಎಲ್ನ ಪೇಶಾವರ್ ಝಲ್ಮಿ ಫ್ರಾಂಚೈಸಿಯು ಬಾಷ್ ಅವರನ್ನು ಮುಂಬರುವ ಟೂರ್ನಿಗೆ ಆಯ್ಕೆ ಮಾಡಿಕೊಂಡಿದ್ದರು.

ಇದರ ನಡುವೆ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಸೌತ್ ಆಫ್ರಿಕಾ ವೇಗಿ ಲಿಝಾಡ್ ವಿಲಿಯಮ್ಸ್ ಮೊಣಕಾಲಿನ ಗಾಯದ ಕಾರಣ ಈ ಬಾರಿಯ ಐಪಿಎಲ್ನಿಂದ ಹಿಂದೆ ಸರಿದಿದ್ದರು. ಹೀಗಾಗಿ ಅವರ ಬದಲಿಯಾಗಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಕಾರ್ಬಿನ್ ಬಾಷ್ ಅವರನ್ನು ಆಯ್ಕೆ ಮಾಡಿಕೊಂಡಿತು.

ಇತ್ತ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚಾನ್ಸ್ ಸಿಕ್ಕಿದ್ದೇ ತಡ, ಕಾರ್ಬಿನ್ ಬಾಷ್ ಪಾಕಿಸ್ತಾನ್ ಸೂಪರ್ ಲೀಗ್ನಿಂದ ಹಿಂದೆ ಸರಿದಿದ್ದಾರೆ. ಹೀಗೆ ಪಿಎಸ್ಎಲ್ ಒಪ್ಪಂದ ನಿಯಮವನ್ನು ಉಲ್ಲಂಘಿಸಿದಕ್ಕಾಗಿ ಇದೀಗ ಕಾರ್ಬಿನ್ ಬಾಷ್ ವಿರುದ್ಧ ಒಂದು ವರ್ಷದ ಅವಧಿಗೆ ನಿಷೇಧ ಹೇರಲಾಗಿದೆ ಎಂದು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ತಿಳಿಸಿದೆ.

ಅದರಂತೆ ಪಾಕಿಸ್ತಾನ್ ಸೂಪರ್ ಲೀಗ್ 2026 ರಲ್ಲಿ ಕಾರ್ಬಿನ್ ಬಾಷ್ಗೆ ಅವಕಾಶ ದೊರೆಯುವುದಿಲ್ಲ. ಇತ್ತ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿರುವ ಕಾರ್ಬಿನ್ ಬಾಷ್, ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಒಡೆತನದ ಎಂಐ ಕೇಪ್ಟೌನ್ ಪರ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಪಿಎಸ್ಎಲ್ನ ಬ್ಯಾನ್ ಸೌತ್ ಆಫ್ರಿಕಾ ವೇಗಿಯ ಮೇಲೆ ದೊಡ್ಡ ಪರಿಣಾಮ ಬೀರುವುದಿಲ್ಲ ಎಂದೇ ಹೇಳಬಹುದು.
Published On - 9:04 am, Sat, 12 April 25