
ಕ್ರಿಕೆಟ್ ಅಂಗಳದಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು (ಇಂಡಿಯಾವಿನ್ ಸ್ಪೋರ್ಟ್ಸ್ ಪ್ರೈ. ಲಿಮಿಟೆಡ್) ಒಟ್ಟು 6 ತಂಡಗಳನ್ನು ಹೊಂದಿದೆ. ಈ ಆರು ತಂಡಗಳಲ್ಲಿ 2 ತಂಡಗಳ ನಾಯಕರಾಗಿ ನಿಕೋಲಸ್ ಪೂರನ್ ಆಯ್ಕೆಯಾಗಿದ್ದಾರೆ. ಅಂದರೆ ಇದೇ ಮೊದಲ ಬಾರಿಗೆ ಮುಂಬೈ ಫ್ರಾಂಚೈಸಿಯು ಎರಡು ತಂಡಗಳಿಗೆ ಒಬ್ಬರನ್ನೇ ಕ್ಯಾಪ್ಟನ್ ಆಗಿ ಆಯ್ಕೆ ಮಾಡಿಕೊಂಡಿದೆ.

ಅದರಂತೆ ಈ ಬಾರಿ ಯುಎಸ್ಎನಲ್ಲಿ ನಡೆಯಲಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಎಂಐ ನ್ಯೂಯಾರ್ಕ್ ತಂಡವನ್ನು ನಿಕೋಲಸ್ ಪೂರನ್ ಮುನ್ನಡೆಸಲಿದ್ದಾರೆ. ಇದಕ್ಕೂ ಮುನ್ನ ಎಂಐ ನ್ಯೂಯಾರ್ಕ್ ತಂಡವನ್ನು ವೆಸ್ಟ್ ಇಂಡೀಸ್ನ ಕೀರನ್ ಪೊಲಾರ್ಡ್ ಮುನ್ನಡೆಸಿದ್ದರು. ಆದರೆ ಈ ಬಾರಿ ಕ್ಯಾಪ್ಟನ್ ಪಟ್ಟ ಪೂರನ್ಗೆ ನೀಡಲಾಗಿದೆ.

ಹಾಗೆಯೇ ಯುಎಇನಲ್ಲಿ ನಡೆಯಲಿರುವ ಇಂಟರ್ನ್ಯಾಷನಲ್ ಟಿ20 ಲೀಗ್ನಲ್ಲೂ ಎಂಐ ಎಮಿರೇಟ್ಸ್ ತಂಡವನ್ನು ನಿಕೋಲಸ್ ಪೂರನ್ ಮುನ್ನಡೆಸಲಿದ್ದಾರೆ. ಈ ಹಿಂದೆ ಪೂರನ್ ಮುಂದಾಳತ್ವದಲ್ಲಿ ಎಮಿರೇಟ್ಸ್ ಪಡೆ ಭರ್ಜರಿ ಪ್ರದರ್ಶನ ನೀಡಿತ್ತು. ಹೀಗಾಗಿ ಇದೀಗ ಎಂಐ ನ್ಯೂಯಾರ್ಕ್ ತಂಡದ ನಾಯಕನಾಗಿ ಪೂರನ್ ಅವರನ್ನು ಆಯ್ಕೆ ಮಾಡಲಾಗಿದೆ.

ಇನ್ನು ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿ ಎಂಐ ಕೇಪ್ಟೌನ್ ತಂಡದ ನಾಯಕರಾಗಿ ಅಫ್ಘಾನಿಸ್ತಾನದ ರಶೀದ್ ಖಾನ್ ಕಾಣಿಸಿಕೊಳ್ಳಲಿದ್ದಾರೆ. ಆದರೆ ಸೌತ್ ಆಫ್ರಿಕಾ ಟಿ20 ಲೀಗ್ನ ಕೆಲ ಪಂದ್ಯಗಳಿಗೆ ರಶೀದ್ ಖಾನ್ ಅಲಭ್ಯರಾಗುವ ಸಾಧ್ಯತೆಯಿದ್ದು, ಹೀಗಾಗಿ ಎಸ್ಎಟಿ20 ಲೀಗ್ನಲ್ಲೂ ಹಂಗಾಮಿ ನಾಯಕರಾಗಿ ಪೂರನ್ ಕಾಣಿಸಿಕೊಳ್ಳಬಹುದು.

ಇತ್ತ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಿದರೆ, ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಹರ್ಮನ್ಪ್ರೀತ್ ಕೌರ್ ಕ್ಯಾಪ್ಟನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ದಿ ಹಂಡ್ರೆಡ್ ಲೀಗ್ನಲ್ಲಿ ಓವಲ್ ಇನ್ವಿನ್ಸಿಬಲ್ ತಂಡವನ್ನು ಖರೀದಿಸಿದ್ದು, ಈ ತಂಡದ ನಾಯಕ ಯಾರಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.