ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಸೂಪರ್ 12 ಹಂತಕ್ಕೂ ತಲುಪದೆ ಗ್ರೂಪ್ ಸ್ಟೇಜ್ನಲ್ಲೇ ಟೂರ್ನಿಯಿಂದ ನಿರ್ಗಮಿಸಿದ ಬಳಿಕ ಮಾಜಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ಇದೀಗ ವಿಂಡೀಸ್ ಏಕದಿನ ಮತ್ತು ಟಿ20 ತಂಡದ ನಾಯಕ ನಿಕೋಲಸ್ ಪೂರನ್ ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿದಿದ್ದಾರೆ.
ಪೂರನ್ ಅವರು ಮೇ 04, 2022 ರಂದು ವೆಸ್ಟ್ ಇಂಡೀಸ್ ಸೀಮಿತ ಓವರ್ಗಳ ಸರಣಿಗೆ ನಾಯಕನಾಗಿ ಆಯ್ಕೆ ಆಗಿದ್ದರು. ಆದರೆ, ಇವರು ನಾಯಕತ್ವದಡಿಯಲ್ಲಿ ಕೆರಿಬಿಯನ್ ತಂಡ ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರಲಿಲ್ಲ. ದುರ್ಬಲ ತಂಡಗಳ ಎದುರೇ ಸೋಲು ಕಂಡಿತ್ತು.
ಮುಖ್ಯವಾಗಿ ಐಸಿಸಿ ಟಿ20 ವಿಶ್ವಕಪ್ನಿಂದ ಹೊರಬಿದ್ದ ಬಳಿಕ ವೆಸ್ಟ್ ಇಂಡೀಸ್ ತಂಡದಲ್ಲಿ ಮಹತ್ವದ ಬದಲಾವಣೆ ಆಗುತ್ತಿದೆ. ತಂಡದ ಹೆಡ್ಕೋಚ್ ಪಿಲ್ ಸಿಮನ್ಸ್ ಕೂಡ ತಮ್ಮ ಸ್ಥಾನದಿಂದ ಕೆಳಗಿಳಿಯಲು ತೀರ್ಮಾನ ಮಾಡಿದ್ದರು.
ಟಿ20 ವಿಶ್ವಕಪ್‌ನಲ್ಲಿ ಅನುಭವಿಸಿದ ಸೋಲು ನೋವುಂಟು ಮಾಡಿದೆ. ಹೀಗಾಗಿ ನಾನು ನಾಯಕತ್ವದ ಬಗ್ಗೆ ಹೆಚ್ಚಿನ ಚಿಂತನೆ ನಡೆಸಿದ್ದೇನೆ. ತಂಡದಲ್ಲಿ ನಾನು ಬಹಳ ಮುಖ್ಯ ಪಾತ್ರ ನಿರ್ವಹಿಸಿದ್ದೇನೆ. ತಂಡದಲ್ಲಿ ಏನೇ ಬದಲಾವಣೆಯಾದರು ಅದನ್ನು ನಾನು ಸುಲಭವಾಗಿ ತೊಡಗಿಸಿಕೊಳ್ಳುತ್ತೇನೆ. ಮುಂದಿನ ಪಂದ್ಯಕ್ಕಾಗಿ ಸಾಕಷ್ಟು ಶ್ರಮವಹಿಸುತ್ತೇನೆ ಎಂದು ಪೂರನ್ ಬರೆದುಕೊಂಡಿದ್ದಾರೆ.
ಕೀರಾನ್ ಪೊಲಾರ್ಡ್ ಅಂತರರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಂದ ನಿವೃತ್ತರಾದ ನಂತರ ಪೂರನ್ ಅವರನ್ನು ಕ್ಯಾಪ್ಟನ್ ಆಗಿ ನೇಮಿಸಲಾಯಿತು. ಒಟ್ಟಾರೆಯಾಗಿ, ಪೂರನ್ 23 T20I ಮತ್ತು 17 ODIಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.
"ನಾನು ನಾಯಕನಾಗಿದ್ದಾಗ ತಂಡದ ಆಟಗಾರರು, ಅಭಿಮಾನಿಗಳು ವೆಸ್ಟ್ ಇಂಡೀಸ್ ಕ್ರಿಕೆಟ್ ನನಗೆ ತುಂಬಾ ಬೆಂಬಲ ನೀಡಿದೆ. ಇದಕ್ಕೆ ನಾನು ಕೃತಜ್ಞನಾಗಿದ್ದೇನೆ. ವೆಸ್ಟ್ ಇಂಡೀಸ್ ಕ್ರಿಕೆಟ್ ಅನ್ನು ಮುಂದಕ್ಕೆ ಕೊಂಡೊಯ್ಯುವ ಮತ್ತು ಹೆಮ್ಮೆ ಪಡುವಂತೆ ಮಾಡುವ ಶಕ್ತಿ ನಮ್ಮಲ್ಲಿದೆ. ಇನ್ನಷ್ಟು ಶ್ರಮವಹಿಸಿ ತಂಡಕ್ಕೆ ಕೊಡುಗೆ ನೀಡುತ್ತೇನೆ'' - ನಿಕೋಲಸ್ ಪೂರನ್.
ಇತ್ತೀಚೆಗಷ್ಟೆ ಮುಕ್ತಾಯಗೊಂಡ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ತಂಡ ಅರ್ಹತಾ ಸುತ್ತಿನಿಂದಲೇ ನಿರ್ಗಮಿಸಿದ ಮನೆಗೆ ತೆರಳಿತು. ಚುಟುಕು ವಿಶ್ವಕಪ್‌ನಲ್ಲಿ ಎರಡು ಬಾರಿ ಚಾಂಪಿಯನ್ ಆಗಿರುವ ಕೆರಿಬಿಯನ್ ತಂಡ ಈ ಬಾರಿ ಸೂಪರ್ 12 ಹಂತಕ್ಕೂ ತಲುಪದೆ ಟೂರ್ನಿಯಿಂದ ಔಟ್ ಆಗಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
Published On - 10:36 am, Tue, 22 November 22