
ದಿ ಹಂಡ್ರೆಡ್ ಲೀಗ್ ಮಹಿಳಾ ಟೂರ್ನಿಯ ಫೈನಲ್ ಪಂದ್ಯದಲ್ಲಿ ನಾರ್ದನ್ ಸೂಪರ್ ಚಾರ್ಜರ್ಸ್ ತಂಡ ಜಯಭೇರಿ ಬಾರಿಸಿದೆ. ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸದರ್ನ್ ಬ್ರೇವ್ ತಂಡವು 100 ಎಸೆತಗಳಲ್ಲಿ 116 ರನ್ ಕಲೆಹಾಕಿದ್ದರು. ಈ ಗುರಿಯನ್ನು 88 ಎಸೆತಗಳಲ್ಲಿ ಬೆನ್ನತ್ತಿ ನಾರ್ದನ್ ಸೂಪರ್ ಚಾರ್ಜರ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಈ ಚಾಂಪಿಯನ್ ಪಟ್ಟ ಸಂಭ್ರಮದ ನಡುವೆ ನಾರ್ದನ್ ಸೂಪರ್ ಚಾರ್ಜರ್ಸ್ ಆಟಗಾರ್ತಿಯರು ಜಾರ್ಜಿಯಾ ವೇರ್‌ಹ್ಯಾಮ್ ಅವರನ್ನು ನೆನಪಿಸಿಕೊಂಡಿದ್ದು ವಿಶೇಷವಾಗಿತ್ತು. ಅಂದರೆ ಟೂರ್ನಿಯಿಂದ ಹೊರಬಿದ್ದಿದ್ದ ತಮ್ಮ ಸಹ ಆಟಗಾರ್ತಿಯ ಕಟೌಟ್ನೊಂದಿಗೆ ನಾರ್ದನ್ ಸೂಪರ್ ಚಾರ್ಜರ್ಸ್ ತಂಡವು ಫೋಟೋಗೆ ಪೋಸ್ ನೀಡಿದ್ದರು.

ಜಾರ್ಜಿಯಾ ವೇರ್‌ಹ್ಯಾಮ್ ಈ ಬಾರಿಯ ದಿ ಹಂಡ್ರೆಡ್ ಲೀಗ್ನಲ್ಲಿ ನಾರ್ದನ್ ಸೂಪರ್ ಚಾರ್ಜರ್ಸ್ ತಂಡದ ಭಾಗವಾಗಿದ್ದರು. ಅಲ್ಲದೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ನಾಕೌಟ್ ಹಂತಕ್ಕೂ ಮುನ್ನವೇ ಜಾರ್ಜಿಯಾ ತೊಡೆಸಂದು ಗಾಯದ ಸಮಸ್ಯೆಯ ಕಾರಣ ಹೊರಗುಳಿದಿದ್ದರು.

ಇತ್ತ ಜಾರ್ಜಿಯಾ ವೇರ್‌ಹ್ಯಾಮ್ ಅನುಪಸ್ಥಿತಿಯ ನಡುವೆ ಅತ್ಯುತ್ತಮ ಪ್ರದರ್ಶನ ನೀಡಿದ ನಾರ್ದನ್ ಸೂಪರ್ ಚಾರ್ಜರ್ಸ್ ತಂಡವು ಫೈನಲ್ನಲ್ಲಿ ಸದರ್ನ್ ಬ್ರೇವ್ ತಂಡವನ್ನು ಬಗ್ಗು ಬಡಿದು ಟ್ರೋಫಿ ಎತ್ತಿಕೊಂಡಿದೆ. ಈ ಟ್ರೋಫಿಯೊಂದಿಗೆ ಪೋಸ್ ನೀಡುವಾಗ ತಮ್ಮ ತಂಡದ ಪರ ಕಣಕ್ಕಿಳಿದ ಜಾರ್ಜಿಯಾ ವೇರ್‌ಹ್ಯಾಮ್ ಅವರ ಕಟೌಟ್ ತಂದು ನಿಲ್ಲಿಸಿದ್ದಾರೆ.

ಇದೀಗ ನಾರ್ದನ್ ಸೂಪರ್ ಚಾರ್ಜರ್ಸ್ ತಂಡದ ಆಟಗಾರ್ತಿಯರ ನಡೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಅಂದಹಾಗೆ ಜಾರ್ಜಿಯಾ ವೇರ್‌ಹ್ಯಾಮ್ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ್ತಿ. RCB ಪರ ಈವರೆಗೆ 20 ಪಂದ್ಯಗಳನ್ನಾಡಿರುವ ಜಾರ್ಜಿಯಾ 20 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಅಲ್ಲದೆ 234 ರನ್ಗಳನ್ನು ಕಲೆಹಾಕಿದ್ದಾರೆ.