ನಾ ಕ್ರಿಕೆಟ್ ಆಡ್ತಿದ್ದೆ… ಅದಕ್ಕೆ ಫಿಟ್ನೆಸ್ ಕಡೆ ಗಮನ ಕೊಡೋಕೆ ಆಗಿಲ್ಲ..!
Azam Khan: ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಆಝಂ ಖಾನ್ ನೀಡಿರುವ ಹೇಳಿಕೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇದಕ್ಕೆ ಮುಖ್ಯ ಕಾರಣ ಅವರು ತಮ್ಮ ಫಿಟ್ನೆಸ್ ಬಗ್ಗೆ ನೀಡಿರುವ ಕುಂಟು ನೆಪ. ಇದೀಗ ಆಝಂ ಖಾನ್ ಅವರ ಹೇಳಿಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ.
Updated on: Sep 01, 2025 | 8:54 AM

ಪಾಕಿಸ್ತಾನ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಆಝಂ ಖಾನ್ (Azam Khan) ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಕೂಡ ಅವರು ಸುದ್ದಿಯಲ್ಲಿರುವುದು ಫಿಟ್ನೆಸ್ ಕಾರಣದಿಂದಾಗಿ. ಅಂದರೆ ದಢೂತಿ ದೇಹದ ಆಝಂ ಖಾನ್ ಅವರ ಆಯ್ಕೆ ಬಗ್ಗೆ ಹಲವು ಬಾರಿ ಪ್ರಶ್ನೆಗಳೆದ್ದಿದ್ದವು.

ಈ ಪಶ್ನೆಗಳ ನಡುವೆಯೇ ಆಝಂ ಖಾನ್ ಹಲವು ಬಾರಿ ಪಾಕಿಸ್ತಾನ್ ಟಿ20 ತಂಡದಲ್ಲಿ ಕಾಣಿಸಿಕೊಂಡಿದ್ದರು. ಇದಾಗ್ಯೂ ಅವರ ಪ್ರದರ್ಶನ ಅಷ್ಟಕಷ್ಟೇ ಆಗಿರುತ್ತಿತ್ತು. ಅಷ್ಟೇ ಅಲ್ಲದೆ ಫಿಟ್ನೆಸ್ ಕಾರಣ ಕಳಪೆ ವಿಕೆಟ್ ಕೀಪಿಂಗ್ ಪ್ರದರ್ಶಿಸುತ್ತಾರೆ ಎಂಬ ಟೀಕೆಗಳು ಕೇಳಿ ಬರುತ್ತಿದ್ದವು. ಈ ಟೀಕೆಗಳ ಕಾರಣ ಕಳೆದೊಂದು ವರ್ಷದಿಂದ ಆಝಂ ಖಾನ್ ಪಾಕ್ ತಂಡದಲ್ಲಿ ಕಾಣಿಸಿಕೊಂಡಿಲ್ಲ.

ಇದೀಗ ಸಂದರ್ಶನವೊಂದರಲ್ಲಿ ತನ್ನ ಫಿಟ್ನೆಸ್ ಬಗ್ಗೆ ಆಝಂ ಖಾನ್ ಮಾತನಾಡಿದ್ದಾರೆ. ಅಚ್ಚರಿ ಎಂಬಂತೆ, ಅವರು ಫಿಟ್ನೆಸ್ ಕಳಪೆಯಾಗಿರಲು ಮುಖ್ಯ ಕಾರಣ ಕ್ರಿಕೆಟ್ ಆಡುತ್ತಿರುವುದಂತೆ. ಅಂದರೆ ಕಳೆದ ಕಳೆದ ಕೆಲ ವರ್ಷಗಳಿಂದ ಕ್ರಿಕೆಟ್ ಆಡುತ್ತಿರುವ ಕಾರಣ ಫಿಟ್ನೆಸ್ ಕಡೆ ಗಮನಹರಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ.

ನನಗೆ ಪಾಕಿಸ್ತಾನ್ ತಂಡದಲ್ಲಿ ಸ್ಥಾನ ಸಿಗದಿದ್ದಾಗ, ಹಲವು ಲೀಗ್‌ಗಳಲ್ಲಿ ಕಣಕ್ಕಿಳಿಯುತ್ತೇನೆ. ಇದರಿಂದಾಗಿ ನನಗೆ ನನ್ನ ದೇಹದತ್ತ ಗಮನ ಕೊಡಲು ಸಾಧ್ಯವಾಗಿಲ್ಲ. ಇದೇ ಕಾರಣದಿಂದಾಗಿ ನಾನು ಫಿಟ್ ಆಗಿಲ್ಲ ಅಷ್ಟೇ ಎಂದು ಆಝಂ ಖಾನ್ ಹೇಳಿದ್ದಾರೆ.

ಇದೀಗ ಆಝಂ ಖಾನ್ ನೀಡಿರುವ ಹೇಳಿಕೆಯು ಭಾರೀ ವೈರಲ್ ಆಗಿದೆ. ಸಾಮಾನ್ಯವಾಗಿ ಕ್ರಿಕೆಟಿಗರು ಫಿಟ್ನೆಸ್ ಸಾಧಿಸಿ ಅಂಗಳಕ್ಕಿಳಿಯುತ್ತಾರೆ. ಆದರೆ ಆಝಂ ಖಾನ್ ಕ್ರಿಕೆಟ್ ಆಡುತ್ತಿರುವ ಕಾರಣ ಫಿಟ್ನೆಸ್ನತ್ತ ಗಮನ ಕೊಡಲು ಸಮಯ ಸಿಗುತ್ತಿಲ್ಲ ಎಂದೇಳಿ ನಗೆಪಾಟಲಿಗೀಡಾಗಿದ್ದಾರೆ.

ಅಂದಹಾಗೆ ಈ ಆಝಂ ಖಾನ್ ಪಾಕಿಸ್ತಾನ್ ತಂಡದ ಮಾಜಿ ವಿಕೆಟ್ ಕೀಪರ್ ಮೊಯೀನ್ ಖಾನ್ ಅವರ ಮಗ. ಪಾಕಿಸ್ತಾನ್ ಪರ ಈವರೆಗೆ 14 ಟಿ20 ಪಂದ್ಯಗಳಲ್ಲಿ 13 ಇನಿಂಗ್ಸ್ ಆಡಿರುವ ಆಝಂ ಕಲೆಹಾಕಿರುವುದು 88 ರನ್ಗಳು ಮಾತ್ರ. ಅಂದರೆ ಪ್ರತಿ ಪಂದ್ಯದ ಅವರ ರನ್ ಸರಾಸರಿ 8.8, ಇದಾಗ್ಯೂ ಅವರು ಕಳೆದ ವರ್ಷದವರೆಗೆ ಪಾಕಿಸ್ತಾನ್ ಟಿ20 ತಂಡದಲ್ಲಿ ಕಾಣಿಸಿಕೊಂಡಿದ್ದರು ಎಂಬುದೇ ಅಚ್ಚರಿ.
